

ಗುಂಡ್ಲುಪೇಟೆ : ಪ್ರತಿಯೊಬ್ಬರಿಗೂ ಕಾನೂನುಗಳ ತಿಳಿವಳಿಕೆ ಅಗತ್ಯವಾಗಿದ್ದು, ಕಾನೂನು ಸೇವಾ ಸಮಿತಿಯ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ತಳವಾರ್ ಹೇಳಿದರು.
ಶನಿವಾರ ತಾಲೂಕಿನ ಮೇಲುಕಾಮನಹಳ್ಳಿಯ ಮುರಾರ್ಜಿ ದೇಸಾಯಿ ಸವತಿ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಸಮಾಜದಲ್ಲಿ ವ್ಯಾಪಕವಾಗಿದ್ದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಮುಂತಾದ ಅನಿಷ್ಟ ಆಚರಣೆಗಳ ನಿವಾರಣೆಗೆ ಹಾಗೂ ಶಾಂತಿ, ಸುವ್ಯವಸ್ಥೆಗಳನ್ನು ಕಾಪಾಡುವ ಸಲುವಾಗಿ ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಿದೆ ಎಂದರು.
ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ 1995ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಆರಂಭಿಸಿ ಜನರಲ್ಲಿ ಕಾನೂನುಗಳ ಅರಿವು ಹಾಗೂ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ವಸತಿ ಶಾಲೆಯ ಪ್ರಾಂಶುಪಾಲ ಗಿರೀಶ್, ಮಕ್ಕಳ ಕಲ್ಯಾಣ ಸಮಿತಿಯ ಸರಸ್ವತಿ, ವಕೀಲರ ಸಂಘದ ಬೀರೇಗೌಡ, ಸ್ವಯಂ ಸೇವಾಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.