ಹಕ್ಕುಪತ್ರಕ್ಕೆ ಕಾನೂನು ತೊಡಕು

Published on

ಕುಂದಾಪುರ: ಪುರಸಭೆ ವ್ಯಾಪ್ತಿಯ ಖಾರ್ವಿಕೇರಿ ನಿವಾಸಿಗಳಿಗೆ 94ಡಿ ಯೋಜನೆಯಡಿ ಹಕ್ಕುಪತ್ರ ಸಿಗಬಹುದು ಎಂಬ ಕನಸಿಗೆ ತಣ್ಣೀರು ಬಿದ್ದಿದೆ. ಖಾಸಗಿ ಭೂಮಾಲೀಕರು ನ್ಯಾಯಾಲಯ ಮೊರೆ ಹೋಗಿದ್ದು, ಇಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಭೂಮಾಲೀಕತ್ವ ನೀಡಲು ಕಾನೂನು ತೊಡಕು ಎದುರಾಗಿದೆ. ಇದನ್ನು ಯಾವ ರೀತಿ ಬಗೆಹರಿಸಬೇಕೆಂದು ಸರ್ಕಾರದ ನಿರ್ದೇಶನ ಕೋರಿ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಹೀಗಾಗಿ ಖಾರ್ವಿಕೇರಿಯ 150ಕ್ಕೂ ಅಧಿಕ ಮಂದಿಗೆ ಸ್ವಂತ ನಿವೇಶನವೇ ಇಲ್ಲದಂತಾಗಿದೆ.

ಕಟ್ಟಿದ ಹಣ ಗೋತಾ: ಕರ್ನಾಟಕ ಗೃಹಮಂಡಳಿ ಮೂಲಕ ಮನೆ, ನಿವೇಶನ ದೊರೆಯುತ್ತದೆ ಎಂದು ನಂಬಿ 2009ರಲ್ಲಿ 150ಕ್ಕೂ ಅಧಿಕ ಮಂದಿ ತಲಾ 1 ಸಾವಿರ ರೂಪಾಯಿಯನ್ನು ನೋಂದಣಿ ಕಾರ್ಡ್‌ಗೆ ಬ್ಯಾಂಕ್ ಮೂಲಕ ಪಾವತಿಸಿದ್ದರು. ಆದರೆ ಈಗ ಕಾರ್ಡೂ ಇಲ್ಲ, ಹಣವೂ ಇಲ್ಲ, ನಿವೇಶನವೂ ಇಲ್ಲ ಎಂಬಂತಾಗಿದೆ.

ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಖುದ್ದು ಭೇಟಿ ನೀಡಿ ಹಕ್ಕುಪತ್ರ ವಿತರಿಸಲು ಮಾಡಬಹುದಾದ ಕ್ರಮಗಳನ್ನು ಪರಿಶೀಲಿಸಿದ್ದಾರೆ. ಕಾಯ್ದೆಯಲ್ಲಿ ತಿದ್ದುಪಡಿ ತಂದರೆ ಅಥವಾ ವಿಶೇಷ ಪ್ರಕರಣ ಎಂದು ಪರಿಗಣಿಸಿದರೆ ಖಾರ್ವಿಕೇರಿಯ ನಿವೇಶನರಹಿತರಿಗೆ ಹಕ್ಕುಪತ್ರ ನೀಡಬಹುದು. ಈ ಬಗ್ಗೆ ರಾಜಕೀಯ ಪ್ರಯತ್ನವೂ ಅಗತ್ಯ. ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಾಯುತ್ತಿರುವವರು ಹೋರಾಟದ ಹಾದಿ ಹಿಡಿಯಲು ಮುಂದಾಗಿದ್ದಾರೆ.

ಏನಿದು 94 ಡಿ..?

ಸರ್ಕಾರ ಮಹತ್ವಾಕಾಂಕ್ಷೆಯಿಂದ ಜಾರಿ ಮಾಡಿದ 94ಸಿ, 94ಸಿಸಿ ಕಾಯ್ದೆಗಳ ಪ್ರಯೋಜನ ಲಕ್ಷಾಂತರ ಮಂದಿಗೆ ದೊರೆತಿದೆ. 94ಡಿ ಅಧಿನಿಯಮ ಅನುಸಾರ ಕಂದಾಯ ಗ್ರಾಮವಲ್ಲದ ಅನಧಿಕೃತ ಬಡಾವಣೆಗಳಾದ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ, ವಡ್ಡರಹಟ್ಟಿ, ಕುರುಬರ ಹಟ್ಟಿ, ನಾಯಕರಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿಯಂತಹ ಮತ್ತಿತರ ರಾಜ್ಯದ 58 ಸಾವಿರಕ್ಕೂ ಅಧಿಕ ಜನವಸತಿ ಪ್ರದೇಶಗಳ ಮನೆಗಳು ಸರ್ಕಾರಿ ಭೂಮಿಯಾಗಿದ್ದಲ್ಲಿ ಈಗಾಗಲೇ ವಾಸಿಸುತ್ತಿರುವವರಿಗೆ ಷರತ್ತಿಗೆ ಒಳಪಟ್ಟು ವಿತರಿಸಲು, 1979ರ ಪೂರ್ವದಲ್ಲಿ ವಾಸಿಸುತ್ತಿರುವವರ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಮಂಜೂರಾತಿಯು ನಾಲ್ಕು ಸಾವಿರ ಚದರಿ ಅಡಿ ಮಿತಿಗೆ ಒಳಪಟ್ಟಿದೆ.

ಕಾನೂನಿನ ತೊಡಕು ಇರುವ ಕಾರಣ ಪ್ರಸ್ತುತ ಇರುವ ನಿಯಮಾವಳಿಗಳಲ್ಲಿ ಖಾರ್ವಿಕೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರದ ನಿರ್ದೇಶನ ಕೋರಿ ಪತ್ರ ಬರೆಯಲಾಗಿದೆ. ಸೂಕ್ತ ಸೂಚನೆ ಬಂದರೆ ಅದರಂತೆ ಕ್ರಮ ಕೈಗೊಳ್ಳಲಾಗುವುದು. ಡಾ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ ಖಾರ್ವಿಕೇರಿ ನಿವಾಸಿಗಳಿಗೆ ಅನೇಕ ದಶಕಗಳಿಂದ ಹಕ್ಕುಪತ್ರ ಇಲ್ಲದೆ ಸಮಸ್ಯೆಯಾಗಿದ್ದು ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಮಾಡಲಾಗಿದೆ. ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಹಕ್ಕುಪತ್ರ ವಿತರಿಸಲು 2ಇ ಅಧಿಸೂಚನೆ ಹೊರಡಿಸಿ ಸೂಕ್ತ ಕ್ರಮಕ್ಕೆ ಆದೇಶಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಶಾಸಕ ಖಾರ್ವಿಕೇರಿಯವರಿಗೆ 94ಡಿ ನಿಯಮದಡಿ ಭೂಮಿ ನೀಡಲು ಕಾನೂನಿನ ತೊಡಕಿದೆ. ಪುರಸಭೆ ವ್ಯಾಪ್ತಿಯಲ್ಲಿ 94ಸಿಸಿ ಅಸ್ತಿತ್ವದಲ್ಲಿರುವುದು. 94ಡಿಯಲ್ಲಿ ಮೀನುಗಾರ ಕುಟುಂಬಗಳಿಗೆ ನೀಡಲು ಅವಕಾಶ ಇಲ್ಲ. ತಾಂಡಾ ಪ್ರದೇಶ ಗುರುತಿಸಿ ನೋಟಿಫಿಕೇಶನ್ ಮಾಡಿ ನಿವೇಶನ ಹಂಚಬಹುದಾದರೂ ಗ್ರಾಮಗಳಿಗೆ ಮಾತ್ರ. ಇಲ್ಲಿ ದೇವಸ್ಥಾನದ ಹಾಗೂ ಖಾಸಗಿ ಭೂಮಿಯಿದ್ದು ಸರ್ಕಾರದ ಭೂಮಿ ಇಲ್ಲದಿರುವುದು ಹಕ್ಕುಪತ್ರ ನೀಡಲು ತೊಡಕಾಗಿದೆ. ಶರಶ್ಚಂದ್ರ ಹೆಗ್ಡೆ ಮೂಡ್ಲಕಟ್ಟೆ, ಆರ್‌ಟಿಐ ಕಾರ್ಯಕರ್ತ https://www.vijayavani.net/the-ashtapavitra-nagamandalatsava-was-a-success

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net