

ಮನೋಹರ ಬಳಂಜ ಬೆಳ್ತಂಗಡಿ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಸವಣಾಲು ಗ್ರಾಮದ ಹಿತ್ತಿಲಪೇಲ ಪ್ರದೇಶಕ್ಕೆ ಮೂಲಸೌಕರ್ಯಗಳಿಲ್ಲದೆ ಸ್ಥಳೀಯರು ಸಂಕಷ್ಟ ಎದುರಿಸುತ್ತಿದ್ದಾರೆ.
ಹಿತ್ತಿಲಪೇಲ ಪ್ರದೇಶಕ್ಕೆ ಹೋಗಬೇಕಾದರೆ ನದಿ ದಾಟಿಯೇ ಹೋಗಬೇಕು. ಈ ನದಿ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಹರಿಯುತ್ತದೆ. ನದಿಗೆ ಸೇತುವೆ ನಿರ್ಮಿಸಲು ವನ್ಯಜೀವಿ ಅರಣ್ಯ ಇಲಾಖೆಯ ಕಾನೂನು ಅಡ್ಡಿಪಡಿಸುತ್ತದೆ. ಈ ಕಾರಣಕ್ಕಾಗಿ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ. ಈ ಪ್ರದೇಶದಲ್ಲಿ 9 ಕುಟುಂಬಗಳಿದ್ದು, 53 ಜನರು ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿನ ಜನರಿಗೆ ಅನಾರೋಗ್ಯ ಉಂಟಾದರೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಈ ಪ್ರದೇಶಕ್ಕೆ ಸಂವಿಧಾನಬದ್ಧ ಮೂಲಸೌಕರ್ಯಗಳಾದ ವಿದ್ಯುತ್, ರಸ್ತೆ ಸಂಪರ್ಕವಿಲ್ಲ. ಮೊಬೈಲ್ ನೆಟ್ವರ್ಕ್ ಇಲ್ಲವೇ ಇಲ್ಲ. ಈ ಪ್ರದೇಶಕ್ಕೆ ಏಕೈಕ ರಸ್ತೆ ಇದ್ದು, ಮಳೆಗಾಲದಲ್ಲಿ ಜೀವದ ಹಂಗು ತೊರೆದು ನದಿಯನ್ನು ದಾಟಿ ಹೋಗುವ ಪರಿಸ್ಥಿತಿ ಇಲ್ಲಿನ ಕುಟುಂಬಗಳದ್ದು. ಇಲ್ಲಿಂದ ಹತ್ತು ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ನದಿಯಲ್ಲಿ ನೀರು ಇಳಿಯುವುದನ್ನು ನೋಡಿ ಪಾಲಕರು ಅವರನ್ನು ನದಿ ದಾಟಿಸಬೇಕಾಗಿದೆ. ಇದು ಮಳೆಗಾಲದಲ್ಲಿ ಬೆಳಗ್ಗೆ, ಸಂಜೆ ದಿನನಿತ್ಯದ ಕಾಯಕ. ನೀರು ಇಳಿಕೆಯಾಗದಿದ್ದರೆ ಇನ್ನೊಂದು ಬದಿಯ ಸಂಬಂಧಿಕರ ಅಥವಾ ಇತರರ ಮನೆಯಲ್ಲಿ ಉಳಿಯಬೇಕಾಗುತ್ತದೆ. ಬೆಳಗ್ಗೆ ಮಳೆ ಜೋರಾದರೆ ಅಂದು ಮಕ್ಕಳಿಗೆ ರಜೆ!
ಪೂಡುಜಾಲು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ನದಿ ಹರಿಯುತ್ತಿದ್ದು, ಇಲ್ಲಿ ಮಳೆಗಾಲದಲ್ಲಿ ನದಿ ದಡದಲ್ಲಿ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿಯೇ ಇಲ್ಲಿನ ಜನರು ಮನೆ ಸೇರಬೇಕಾಗಿದೆ. ಎರಡು ಕಿ.ಮೀ ಪ್ರತಿನಿತ್ಯ ನಡೆದುಕೊಂಡೇ ಹೋಗಬೇಕು. ಮನೆ ಬಳಕೆಯ ಅಗತ್ಯ ಸಾಮಗ್ರಿಗಳನ್ನು ತಲೆಹೊರೆಯಲ್ಲಿಯೇ ಸಾಗಿಸಬೇಕಾದ ಅನಿವಾರ್ಯತೆ. ಮಳೆ ಜೋರಾಗಿದ್ದರೆ ಅಂದು ಕೆಲಸಕ್ಕೂ ರಜೆ..!
ಕಾಲುಸಂಕವೂ ಇಲ್ಲ
ಸೇತುವೆಯಿಲ್ಲದ ಕಾರಣ ನದಿ ದಾಟಲು ತಾತ್ಕಾಲಿಕ ಕಾಲು ಸಂಕವನ್ನು ಈ ಹಿಂದೆ ನಿರ್ಮಿಸಲಾಗಿತ್ತು. ಕಳೆದ ಮಳೆಗಾಲದಲ್ಲಿ ಇದೂ ಹೋಗಿದೆ. ಸೇತುವೆ ನಿರ್ಮಾಣವಾಗುವ ತನಕ ತಾತ್ಕಾಲಿಕ ಕಾಲುಸಂಕ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡಬೇಕು. ಈ ಪ್ರದೇಶದ ಅಭಿವೃದ್ಧಿಗೆ ಅರಣ್ಯ ನೀತಿ ಅಡ್ಡಿಯಾಗಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಈ ಕಾರಣದಿಂದ ಇಲ್ಲಿನ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ. ಅನಾದಿಕಾಲದಿಂದ ವಾಸಿಸುತ್ತಿರುವ ಇಲ್ಲಿಯ ಮಂದಿ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಭವಿಷ್ಯದಲ್ಲಿ ಎಲ್ಲರಂತೆ ತಮಗೂ ಮೂಲಸೌಕರ್ಯಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇಲ್ಲಿನ ನಿವಾಸಿಗಳು ಜೀವನ ಸಾಗಿಸುತ್ತಿದ್ದಾರೆ. ಮಲವಂತಿಗೆ ಗ್ರಾಮದ ದಿಡುಪೆ- ಎಳನೀರು ರಸ್ತೆ ಅಭಿವೃದ್ಧಿಗೆ ಇರುವ ಅಡ್ಡಿಗಳು ಈ ಪ್ರದೇಶದಲ್ಲೂ ಇವೆ.
ಮಳೆಗಾಲದಲ್ಲಿ ದ್ವೀಪವಾಗುವ ಹಿತ್ತಿಲಪೇಲಕ್ಕೆ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭ ಭರವಸೆ ಮಾತ್ರ ಸಿಗುತ್ತಿದ್ದು, ಇಲ್ಲಿನ ಅಭಿವೃದ್ಧಿ ಶೂನ್ಯವಾಗಿದೆ. ಇಲ್ಲಿ ಕಾಲುಸಂಕ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗಿದೆ. ಜಯಾನಂದ ಪಿಲಿಕಲ ಆದಿವಾಸಿ ಮುಖಂಡ ದ್ವಿಚಕ್ರ ವಾಹನದಲ್ಲಿ ನದಿ ಮಧ್ಯೆ ಹೋಗುತ್ತಿದ್ದ ಸಂದರ್ಭ ಏಕಾಏಕಿ ನೀರು ಹೆಚ್ಚಾಗಿದ್ದು ಈ ವೇಳೆ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ನೀರಿನಲ್ಲಿ ಕೊಚ್ಚಿ ಹೋಯಿತು. ಜತೆಗಾರ ಸಂಜೀವ ಪೂಜಾರಿ ನನ್ನ ಜೀವ ರಕ್ಷಣೆ ಮಾಡಿದರು. ಒಂದು ಕಿ.ಮೀ. ದೂರ ಕೊಚ್ಚಿ ಹೋದ ಸ್ಕೂಟರ್ ಕಲ್ಲಿನ ಕ್ವಾರಿಯಲ್ಲಿ ಸಿಲುಕಿಕೊಂಡಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. ಸತೀಶ್ ಸ್ಕೂಟರ್ ಸವಾರ, ಸವಣಾಲು