ಹಳೇ ಹುಬ್ಬಳ್ಳಿ ಗಲಭೆ ಕೇಸ್​ ವಾಪಸ್​ ಪಡೆದರೆ ಕಾನೂನು ಹೋರಾಟ

Pralhad Joshi 3
Published on

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಭೆ ಕೇಸ್​ ಹಿಂಪಡೆಯುವ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಬಿಜೆಪಿಯಿಂದ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಸಚಿವ ಸಂಪುಟ ಸಭೆಯಲ್ಲಿ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯಲು ತೀರ್ಮಾನಿಸಿ, ವಕೀಲರ ಮೂಲಕ ನ್ಯಾಯಾಲಯಕ್ಕೆ ಅಜಿರ್ ಸಲ್ಲಿಸಿದೆ ಎಂಬ ಮಾಹಿತಿ ಇದೆ. ಬಿಜೆಪಿಯಿಂದಲೂ ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದರು.

ಕಿಡಿಗೇಡಿಗಳು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಲು ಹೋಗಿದ್ದರು. ಪೊಲೀಸ್​ ಅಧಿಕಾರಿಗಳ ಮೇಲೆ ದಾಳಿ ಸಹ ನಡೆಸಿದ್ದರು. ಪೊಲೀಸ್​ ವಾಹನಗಳನ್ನು ಜಖಂ ಗೊಳಿಸಿದ್ದರು. ಇದನ್ನೆಲ್ಲ ಆಗಿನ ಪೊಲೀಸ್​ ಅಧಿಕಾರಿಗಳು ಚಾರ್ಜ್​ಶೀಟ್​ನಲ್ಲೇ ಸ್ಪಷ್ಟಪಡಿಸಿದ್ದಾರೆ. ಸಮಾಜ ರಕ್ಷಣೆ ಕಾರ್ಯದಲ್ಲಿ ತೊಡಗಿದ ಪೊಲೀಸರನ್ನು ರಕ್ಷಿಸುವ ಇರಾದೆ ಈ ಸರ್ಕಾರಕ್ಕೆ ಇಲ್ಲವೇ? ಎಂದು ಪ್ರಶ್ನಿಸಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಹೊರಗಿನವರ ಕೈವಾಡವಿದೆ. ಉಗ್ರವಾದ ಚಟುವಟಿಕೆ ಸ್ವರೂಪದಂತಿದೆ ಎಂಬ ಕಾರಣಕ್ಕೆ ಆಗಲೇ ಸಿಬಿಐ ತನಿಖೆಗೆ ವಹಿಸಲು ಚರ್ಚೆ ನಡೆದಿತ್ತು. ಆದರೆ, ಈ ಸರ್ಕಾರ ಗಲಭೆ ಆರೋಪಿಗಳನ್ನು ಖುಲಾಸೆಗೊಳಿಸಲು ನೋಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಸರ್ಕಾರದ ಪ್ರಕಾರ ಗಲಭೆ ವೇಳೆ ಪೊಲೀಸರೇ ತಪ್ಪೆಸಗಿದ್ದಾರೆ ಎಂದಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿ ನೋಡೋಣ ಎಂದ ಸಚಿವ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಸಂರ್ಪೂಣ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ ಪಡೆದರೆ ರಾಜ್ಯದಲ್ಲಿ ಉಗ್ರವಾದ ಚಟುವಟಿಕೆಗಳಿಗೆ ತಾನೇ ಬೆಂಬಲ ನೀಡಿದಂತೆ ಆಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಅನ್ಯಾಯ ಮಾಡಿಲ್ಲ: ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎನ್ನುತ್ತಲೇ ಇದೆ ರಾಜ್ಯ ಸರ್ಕಾರ. ಇದಕ್ಕೆ ನಾನು ಸಾಕಷ್ಟು ಬಾರಿ ಅಂಕಿ ಅಂಶ ಸಮೇತ ಸ್ಪಷ್ಟಪಡಿಸಿದ್ದೇನೆ. ಹಣಕಾಸು ಆಯೋಗ ಮೊದಲ ಪ್ರಧಾನಿ ಜವಾಹರಲಾಲ್​ ನೆಹರು ಕಾಲದಿಂದಲೂ ಇದ್ದು, ಅದರ ಪ್ರಕಾರವೇ ಕೇಂದ್ರ ಅನುದಾನ ಒದಗಿಸುತ್ತಿದೆ. ಇನ್ನೂ ಹೆಚ್ಚಿನ ಹಣಕಾಸು ನೀಡಿದೆಯೇ ಹೊರತು ಅನ್ಯಾಯ ಮಾಡಿಲ್ಲ ಎಂದು ಜೋಶಿ ಸರ್ಮಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net