ಗ್ಲಾಸ್ ಬ್ರಿಡ್ಜ್ ಮಾಡಿದಲ್ಲಿ ಕಾನೂನು ಹೋರಾಟ

appcchu ranjan
Published on

ಮಡಿಕೇರಿ: ನಗರದ ರಾಜಾಸೀಟ್ ಉದ್ಯಾನವನದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದಲ್ಲಿ ನಗರದ ನಿವಾಸಿಗಳೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದರ ಜತೆಗೆ ಕಾನೂನು ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಮತ್ತು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಎಚ್ಚರಿಸಿದರು.

ರಾಜಾಸೀಟ್ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅಲ್ಲದೇ, ಈಗಾಗಲೇ ವಾಹನ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತದೆ. ಚಾಮುಂಡೇಶ್ವರಿ ನಗರದ ಮೇಲೆ ಕೆಲವು ವರ್ಷಗಳ ಹಿಂದೆ ಬಿರುಕುಬಿಟ್ಟು ಆತಂಕವನ್ನುಂಟು ಮಾಡಿತ್ತು. ಇಂತಹ ಸಂದರ್ಭದಲ್ಲಿ ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಅಗತ್ಯವಿದೆಯೇ?. ಎಲ್ಲರ ವಿರೋಧ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ನಿವಾಸಿಗಳೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದರ ಜತೆಗೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಇದೊಂದಿಗೆ ಜಿಲ್ಲೆಯಲ್ಲಿ ಅಸ್ಸಾಂ ನಿವಾಸಿಗಳ ಸೋಗಿನಲ್ಲಿರುವ ಬಾಂಗ್ಲದೇಶಿರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲೆಯ ಎಲ್ಲಾ ಪಿಡಬ್ಲ್ಯೂಡಿ ರಸ್ತೆಗಳು ಗುಂಡಿಬಿದ್ದಿದೆ. ಆದರೆ, ದುರಸ್ತಿಗೆ ಮುಂದಾಗುತ್ತಿಲ್ಲ. ಸಂಬಂಧಪಟ್ಟವರು ಗಮನಹರಿಸಿ ದುರಸ್ತಿ ಮಾಡುವಂತಾಗಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಜಗದೀಶ್ ರೈ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಕವನ್ ಕಾರ್ಯಪ್ಪ, ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net