ಗೋಣಿಕೊಪ್ಪಲು: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ಸಮುದಾಯವೊಂದು ದಾಖಲಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಸಿಎನ್‌ಸಿ ಪ್ರಮುಖರು, ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.
ಆಧಿಮ ಸಂಜಾತ ಕೊಡವ ನೆಲದ ರಕ್ಷಣೆ, ನಾಗರಿಕರ ಸುರಕ್ಷತೆ ಮತ್ತು ಸಾಂಪ್ರದಾಯಿಕ ಹಕ್ಕುಗಳ ಸಂರಕ್ಷಣೆಯ ಹೊರೆ ಹೊತ್ತು ಸುಮಾರು 35 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವ ಸಿಎನ್‌ಸಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ಸಮುದಾಯವೊಂದು ಮೊಕದ್ದಮೆ ದಾಖಲಿಸಿರುವುದು ಖಂಡನೀಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸದಸ್ಯ ಕಾಂಡೇರ ಸುರೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡಗಿನ ಯಾವುದೇ ದೇವಸ್ಥಾನಗಳಲ್ಲಿ ಕೊಡವ ಸಾಂಪ್ರದಾಯಿಕ ಉಡುಪು ಧರಿಸಬಾರದೆಂಬ ಕಾನೂನು ಇಲ್ಲದಿದ್ದರೂ ಕಟ್ಟೆಮಾಡು ದೇವಸ್ಥಾನದಲ್ಲಿ ಮಾತ್ರ ಕೊಡವ ಸಾಂಪ್ರದಾಯಿಕ ಉಡುಪು ಧರಿಸಬಾರದೆಂಬ ಕಾನೂನು ಏಕೆಂದು? ತೀಕ್ಷ್ಣವಾಗಿ ಪ್ರಶ್ನಿಸಿದ ಕಾಂಡೇರ ಸುರೇಶ್ ಅವರು, ಇದು ಕೊಡವರನ್ನು ಒಕ್ಕಲೆಬ್ಬಿಸುವ ಹುನ್ನಾರವೆಂದು ಆರೋಪಿಸಿದರು.
ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಹೇಳನ ಮಾಡಿದ ವಕೀಲರೊಬ್ಬರ ವಿರುದ್ಧ ಜಾಮೀನು ಸಹಿತ ಪ್ರಕರಣ ದಾಖಲಾಗಿದ್ದರೆ, ಯಾವುದೇ ಜನಾಂಗಕ್ಕೆ ನೋವುಂಟಾಗುವಂತಹ ರೀತಿಯಲ್ಲಿ ಮಾತನಾಡದ ನಾಚಪ್ಪ ಅವರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಾಗಿರುವುದು ಖಂಡನೀಯ ಎಂದರು.
ಯಾವುದೇ ಸಮುದಾಯದವರು ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿದ್ದ ಮಾತ್ರಕ್ಕೆ ಅವರು ಆ ನೆಲದ ಶಾಶ್ವತ ಹಕ್ಕುದಾರರಾಗುವುದಿಲ್ಲ. ಒಂದು ಸಮುದಾಯವು ತನ್ನ ಬದುಕನ್ನು ಕಾನೂನು ಕಟ್ಟಳೆಯ ಮೂಲಕ ರೂಪಿಸಿ ನೆಲದ ಹಕ್ಕನ್ನು ದಾಖಲೆಯೊಂದಿಗೆ ಪ್ರತಿಪಾದಿಸಿ ಸಮುದಾಯದ ಹೆಗ್ಗರುತನ್ನು ಸಂಪ್ರದಾಯದ ಆಚರಣೆ ಹಾಗೂ ಬೇರೆ ಯಾವುದೇ ಸಮುದಾಯಕ್ಕೆ ಸಂಬಂಧವೇ ಇಲ್ಲದ ಉಡುಪನ್ನು ತೊಟ್ಟು ಸಮುದಾಯದ ಹೆಗ್ಗರುತಿನ ಚಿಹ್ನೆ ರೂಪಿಸಿ ಧರಿಸಿದರೆ ಮಾತ್ರ ಆ ಸಮುದಾಯಕ್ಕೆ ಆ ನೆಲದ ಹಕ್ಕುದಾರ ಎಂಬ ಹಣೆಪಟ್ಟಿ ದೊರಕುತ್ತದೆ ಎಂದು ಕಾಂಡೇರ ಸುರೇಶ್ ಹೇಳಿದರು.
ಕೊಡಗಿನ ಆಸ್ಪತ್ರೆಯಲ್ಲಿ ಹುಟ್ಟಿದ ಮಾತ್ರಕ್ಕೆ ನಾನು ಕೊಡಗಿನ ನೆಲದ ಹಕ್ಕುದಾರನೆಂದರೆ ಏನರ್ಥ? ಎಂದು ಪ್ರಶ್ನಿಸಿದರು.
ಶಾಂತಿಯುತವಾಗಿ ಸಿಎನ್‌ಸಿ ಸಂಘಟನೆಯ ಅಧ್ಯಕ್ಷರು ಕೇಳುವ ಪ್ರಶ್ನೆಗಳನ್ನು ಬೇರೆ ರೂಪದಲ್ಲಿ ಪ್ರಚೋದಿಸಿ ನಾಚಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಕಾಂಡೇರ ಸುರೇಶ್ ಅವರು, ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಬೇಗೂರು ನಿವಾಸಿ ಅಪ್ಪೇಂಗಡ ಮಾಲೆ ಪೂಣಚ್ಚ, ದೇವನೂರು ಗ್ರಾಮದ ಪಾರೊಂಗಡ ನವೀನ್ ಸೋಮಯ್ಯ ಉಪಸ್ಥಿತರಿದ್ದರು.