90ರ ವಯಸ್ಸಿನಲ್ಲಿ ಭೂಮಿಗಾಗಿ ಕಾನೂನು ಹೋರಾಟ!

bhadrapura
ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲಿರುವ ರೈತ ಬಸಪ್ಪ. ಪತಿಯ ಸ್ಥಿತಿಯನ್ನು ಅಸಹಾಯಕತೆಯಿಂದ ನೋಡುತ್ತಿರುವ ಸುಶೀಲಮ್ಮ.
Published on

ಅರವಿಂದ ಅಕ್ಲಾಪುರ ಶಿವಮೊಗ್ಗ
ಶಿಕಾರಿಪುರ ಸಮೀಪದ ಭದ್ರಾಪುರ ಗ್ರಾಮದ ರೈತ ಬಸಪ್ಪ ಅವರಿಗೆ ಈಗ 90 ವರ್ಷ. ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿರುವ ಅವರು ಛಲ ಬಿಡದ ತ್ರಿವಿಕ್ರಮನಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕಳೆದೊಂದು ತಿಂಗಳಿನಿಂದ ಭೂಕಬಳಿಕೆ ನಿಷೇಧ ಕಾಯ್ದೆಯ ಬಿಸಿ ಅನೇಕ ರೈತರಿಗೆ ತಟ್ಟಿದೆ. ಅವರಲ್ಲಿ ಬಸಪ್ಪ ಕೂಡಾ ಒಬ್ಬರು. 2011ರಲ್ಲಿ ಅವರ ವಿರುದ್ಧ ಭೂಕಬಳಿಕೆ ನಿಷೇಧ ಕಾಯ್ದೆಯಡಿ ದಾಖಲಾದ ದೂರು ಅವರನ್ನು ಶಿಕಾರಿಪುರದಿಂದ ಹೈಕೋರ್ಟ್‌ನವರೆಗೂ ಕೊಂಡೊಯ್ದಿದೆ.
ಜುಲೈ 25ರಂದು ಬಸಪ್ಪ ಅವರಿಗೆ ಸಂಬಂಧಿಸಿದ ಪ್ರಕರಣದ ತೀರ್ಪನ್ನು ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಪ್ರಕಟಿಸಿತು. ಆ ವೇಳೆ ಬಸಪ್ಪ ಬೆಂಗಳೂರಿಗೆ ತೆರಳುವುದೂ ಸಾಧ್ಯವಾಗಲಿಲ್ಲ. ಅವರು ಮಂಚದಲ್ಲೇ ಮಲಗಿದ್ದರು. ಮನೆಯಿಂದಲೇ ವೀಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದರು.
ತಮ್ಮ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಏನು ಹೇಳಬೇಕೆಂಬುದೇ ಬಸಪ್ಪ ಅವರಿಗೆ ತಿಳಿಯಲಿಲ್ಲ. ಅತ್ತ ಕಡೆಯಿಂದ ನ್ಯಾಯಾಧೀಶರು ನೀಡಿದ ತೀರ್ಪಿನ ಬಗ್ಗೆಯೂ ಅವರಿಗೆ ಅರ್ಥವಾಗಲಿಲ್ಲ. ಸುಮ್ಮನೇ ಇದ್ದು ಕೋರ್ಟ್ ಕಲಾಪಕ್ಕೆ ಮೂಕ ಸಾಕ್ಷಿಯಾದರು.
ಶತಾಯುಷ್ಯಕ್ಕೆ ದಶಕವಷ್ಟೇ ಬಾಕಿ ಇರುವಾಗ ನನಗೆ ಕೋರ್ಟ್ ಸೆರೆವಾಸದ ಶಿಕ್ಷೆ ನೀಡಿದೆ ಎಂಬ ಸಣ್ಣ ಸುಳಿವೂ ಬಸಪ್ಪ ಅವರಿಗಿಲ್ಲ. ಈಗ ಅವರ ಮಗ ಅಯ್ಯಣ್ಣ ತಂದೆಯ ಹೆಸರಿನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ತಿಂಗಳ ಆರಂಭದಲ್ಲೇ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಭೂಕಬಳಿಕೆ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದಾರೆ.
36 ಗುಂಟೆ ಜಾಗ!:ಈಗ ಕೋರ್ಟ್ ಕಟಕಟೆ ಏರಿರುವ ಭದ್ರಾಪುರ ಸರ್ವೇ ನಂ.19ರ 36 ಗುಂಟೆ ಜಾಗದಲ್ಲಿ ಬಸಪ್ಪ 1990ರಿಂದಲೂ ಸಾಗುವಳಿ ಮಾಡುತ್ತಿದ್ದಾರೆ. ಆರಂಭದಲ್ಲಿ ಮೆಕ್ಕಜೋಳ, ರಾಗಿ ಬೆಳೆಯಲಾಗುತ್ತಿತ್ತು. 2011ರಲ್ಲಿ ಸರ್ಕಾರಿ ಜಾಗ ಕಬಳಿಕೆ ಎಂಬ ಕಾರಣ ನೀಡಿ ಅಂದಿನ ತಹಸೀಲ್ದಾರ್ ಗುರುರಾಜ್ ಪ್ರಕರಣ ದಾಖಲಿಸಿದ್ದರು. ಅಂದಿನಿಂದಲೂ ಕಾನೂನು ಹೋರಾದ ಆರಂಭವಾಗಿದೆ. 2017ರಲ್ಲಿ ಇಲ್ಲಿ ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ಬಸಪ್ಪ ಅವರ ಮೂವರು ಪುತ್ರರು ಈಗ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನೇನು ನೆಟ್ಟ ಗಿಡದಲ್ಲಿ ಫಸಲು ಕಾಣಬೇಕು ಎನ್ನುವ ಕಾಲಕ್ಕೆ ಕೋರ್ಟ್ ತೀರ್ಪು ಬರಸಿಡಿಲಿನಂತೆ ಬಂದೆರಗಿದೆ.
ಎದ್ದು ಓಡಾಡಲು ಆಗಲ್ಲ: ಈಗ ಬಸಪ್ಪ ಅವರು ವಯೋಸಹಜ ಸಮಸ್ಯೆಯಿಂದ ಕುಗ್ಗಿ ಹೋಗಿದ್ದಾರೆ. ಅವರಿಗೆ ಎದ್ದು ಓಡಾಡಲೂ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಕೆಲಸಕ್ಕೂ ಬೇರೆಯವರ ಮೇಲೆ ಅವಲಂಭಿತರಾಗಿದ್ದಾರೆ. ಅವರ ಪಕ್ಕದಲ್ಲಿ ಸದಾ ಮನೆಯವರೊಬ್ಬರು ಇರಲೇ ಬೇಕು. ಕಿವಿ ಕೇಳುವುದಿಲ್ಲ. ಕೋರ್ಟ್‌ನಲ್ಲಿ ಏನಾಗಿದೆ ಎಂಬುದೇ ಇವರಿಗೆ ತಿಳಿದಿಲ್ಲ. ನಾಲ್ಕಾರು ಬಾರಿ ಬಾಡಿಗೆ ಕಾರಿನಲ್ಲಿ ಅವರನ್ನು ಕೋರ್ಟ್ ವಿಚಾರಣೆಗೆ ಕರೆದೊಯ್ದಿದ್ದೆವು. ಈಗ ಅವರ ಪರವಾಗಿ ನನ್ನ ಮಕ್ಕಳು ಕೋರ್ಟ್‌ನಲ್ಲಿ ಹೋರಾಡುತ್ತಿದ್ದಾರೆ ಎಂದು ಬಸಪ್ಪ ಪತ್ನಿ ಕಣ್ಣೀರಾದರು.
ಸಣ್ಣ ರೈತರಿಗೆ ತೂಗುಕತ್ತಿ:ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರ ಮೇಲೆ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೀಗೆ ದಾಖಲಾದ ಪ್ರಕರಣಗಳಲ್ಲಿ ಬಹುತೇಕ ಸಣ್ಣ ಹಿಡುವಳಿದಾರರಿಗೆ ಸಂಬಂಧಿಸಿದ್ದು. ಕೆಲವೇ ಗುಂಟೆ ಜಾಗದಿಂದ ಹಿಡಿದು, ಒಂದೆರಡು ಎಕರೆ ಒತ್ತುವರಿ ಮಾಡಿಕೊಂಡಿರುವವರ ಸಂಖ್ಯೆಯೇ ಹೆಚ್ಚು. ಅರಣ್ಯ ಇಲಾಖೆಯಿಂದ ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆಯೂ ಇದೇ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ಜಾಗ ಒತ್ತುವರಿಗೆ ದೂರುಗಳನ್ನು ಆಧರಿಸಿ ಆಯಾ ತಹಸೀಲ್ದಾರ್ ದೂರು ದಾಖಲಿಸುತ್ತಾರೆ.
13 ವರ್ಷಗಳ ಹಿಂದಿನ ಕಾಯ್ದೆ:ರಾಜ್ಯ ಸರ್ಕಾರ 2011ರಲ್ಲಿ ಜಾರಿಗೆ ತಂದ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆಯಡಿ ನಾಲ್ಕು ವರ್ಷಗಳ ಹಿಂದಿನವರೆಗೆ ಶಿವಮೊಗ್ಗ ಜಿಲ್ಲೆಯಲ್ಲೇ ಒಟ್ಟು 71 ಸಾವಿರ ಎಕರೆಯನ್ನು ಗುರುತಿಸಲಾಗಿತ್ತು. 2019ರಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಈ ಪ್ರಕರಣದಡಿ ಇಬ್ಬರಿಗೆ ಶಿಕ್ಷೆ ಪ್ರಕಟವಾಗಿತ್ತು. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಒತ್ತುವರಿ ತೆರವಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದ ಬಳಿಕ ಈ ಕಾಯ್ದೆಗೆ ಮತ್ತಷ್ಟು ವೇಗ ಸಿಕ್ಕಿದೆ. ಇನ್ನೊಂದೆಡೆ ವಿಶೇಷ ನ್ಯಾಯಾಲಯ ತ್ವರಿತವಾಗಿ ಪ್ರಕರಣಗಳಲ್ಲು ಇತ್ಯರ್ಥ ಮಾಡುತ್ತಿದೆ.
ಆದೇಶ ಅನ್ವಯ ಆಗಲ್ಲ: ಇತ್ತೀಚೆಗೆ ಆದೇಶ ನೀಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ 2015ರ ಬಳಿಕದ ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸಿ ಎಂದಿದ್ದರು. ಆದರೆ 2015ಕ್ಕೂ ಪೂರ್ವದಲ್ಲಿ ಭೂಕಬಳಿಕ ನಿಷೇದ ಕಾಯ್ದೆಯಡಿ ದಾಖಲಾದ ಪ್ರಕರಣಗಳಿಗೆ ಇದು ಅನ್ವಯವಾಗುವುದಿಲ್ಲ. ಹೀಗಾಗಿ ಮಲೆನಾಡು ಜಿಲ್ಲೆಗಳ ಸಣ್ಣ ಹಿಡುವಳಿದಾರರಿಗೆ ಈಗ ಭೂಕಬಳಿಕೆ ನಿಷೇಧ ಕಾಯ್ದೆಯ ಕುಣಿಕೆ ಬಿಗಿಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net