ರೈತರ ಪರ ಕಾನೂನು ಹೋರಾಟ ಮುಂದುವರಿಕೆ

SIRSI MEETING
Published on

ಶಿರಸಿ: ಸಾಲಮನ್ನಾ ಯೋಜನೆ ಸಂಬಂಧಿಸಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ನೀಡದ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ರೈತರ ಪರವಾಗಿ ಕಾನೂನು ಹೋರಾಟ ಮುಂದುವರಿಸಲು ನಿರ್ಣಯಿಸಲಾಯಿತು.

ನಗರದ ಟಿಆರ್​ಸಿ ಸಭಾಭವನದಲ್ಲಿ ಜರುಗಿದ ಉತ್ತರಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಕೃಷಿಕರ ಸಂಕಷ್ಟ ಪರಿಸ್ಥಿತಿ ಪರಿಗಣಿಸಿ 2018ರಲ್ಲಿ ರಾಜ್ಯ ಸರ್ಕಾರದ ಕೃಷಿಕರ 1 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಈ ಸಾಲ ಮನ್ನಾ ಜಾರಿಗೊಳ್ಳುವ ಹಂತದಲ್ಲಿ ಸರ್ಕಾರ ಹಲವಾರು ನಿಬಂಧನೆಗಳನ್ನು ವಿಧಿಸಿ ಹಂತ ಹಂತವಾಗಿ ಕೃಷಿಕರನ್ನು ಗ್ರೀನ್ ಲಿಸ್ಟ್​ಗೆ ಒಳಪಡಿಸಿ ಯೋಜನೆ ಜಾರಿಗೊಳಿಸಿತ್ತು. ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಅನುಷ್ಟಾನ ಸಮಿತಿಗಳನ್ನು ರಚಿಸಿ ಸಾಲ ಮನ್ನಾ ಅರ್ಹತಾ ಮಾನದಂಡಗಳಿಗೆ ಒಳಪಟ್ಟು ಬಿಡುಗಡೆಗೆ ಬಾಕಿ ಇರುವ ಕೃಷಿಕರ ಗ್ರೀನ್ ಲಿಸ್ಟ್ ಬಿಡುಗಡೆ ಗೊಳಿಸಲಾಗಿತ್ತು. ಅಂತಿಮವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 1180 ಕೃಷಿಕರು ಸಾಲಮನ್ನಾಕ್ಕೆ ಅರ್ಹರೆಂದು ಗ್ರೀನ್ ಲಿಸ್ಟ್ ಪಟ್ಟಿಯಲ್ಲಿ ಪ್ರಕಟಗೊಂಡಿದ್ದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಉಚ್ಚ ನ್ಯಾಯಾಲಯದಲ್ಲಿ ಕೃಷಿಕರ ಪರವಾಗಿ 2023ರ ಏಪ್ರಿಲ್​ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದವು.

ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಗ್ರೀನ್ ಲಿಸ್ಟ್​ನಲ್ಲಿ ಬಂದಿರುವ ಈ ಸಂಘಗಳ ಸದಸ್ಯ ಕೃಷಿಕರಿಗೆ ಆದೇಶದ ಪ್ರತಿ ತಲುಪಿದ ನಾಲ್ಕು ವಾರದೊಳಗೆ ಸಾಲ ಮನ್ನಾ ಹಣ ಬಿಡುಗಡೆಗೊಳಿಸುವಂತೆ ಆದೇಶ ಹೊರಡಿಸಿತ್ತು. ಈ ಆದೇಶವಾಗಿ ಹಲವು ತಿಂಗಳು ಕಳೆದರೂ ನ್ಯಾಯಾಲಯದ ಆದೇಶಕ್ಕೆ ಕವಡೆ ಕಿಮ್ಮತ್ತು ಕೊಡದ ಸರ್ಕಾರ ಮನ್ನಾ ಹಣ ಬಿಡುಗಡೆಗೊಳಿಸಿರಲಿಲ್ಲ. ಈ ಕುರಿತು ಪ್ರಾಥಮಿಕ ಪತ್ತಿನ ಸಂಘದವರು ನ್ಯಾಯಾಲಯ ಆದೇಶ ನಿಂದನಾ ಅರ್ಜಿ ದಾಖಲಿಸಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ಸಂಬಂಧಿಸಿ 2023ರ ಡಿಸೆಂಬರ್ 1ರಂದು ಸರ್ಕಾರದ ಆರ್ಥಿಕ ಇಲಾಖೆ ಉಪಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೆಳೆ ಸಾಲ ಮನ್ನಾ ಯೋಜನೆ ವಿಷಯವು ಸರ್ಕಾರದ ನೀತಿ ನಿಯಮಕ್ಕೆ ಸಂಬಂಧಿಸಿದ್ದಾಗಿದ್ದು, ಸರ್ಕಾರ ಈ ಯೋಜನೆಯನ್ನು 2021ರಲ್ಲಿಯೇ ಮುಕ್ತಾಯಗೊಳಿಸಲು ಸೂಚಿಸಿದೆ.

ಈ ಯೋಜನೆಯನ್ನು ಮತ್ತೆ ತೆರೆಯುವ ಪ್ರಮೇಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಾಥಮಿಕ ಪತ್ತಿನ ಸಂಘಗಳಿಗೆ ಹಿಂಬರಹ ನೀಡಿ ಸಹಕಾರ ಸಂಘಗಳ ನಿಬಂಧಕರ ಕಚೇರಿ ಬೆಂಗಳೂರು ಇವರ ಪತ್ರ 2024ರ ನವೆಂಬರ್ 29ರ ಮೂಲಕ ತಿಳಿಸಿದ್ದಾರೆ ಎಂದರು.

ಸರ್ಕಾರವು ಯೋಜನೆ ಸ್ಥಗಿತಗೊಳಿಸುವ ಉದ್ದೇಶ ಹೊಂದಿದ್ದರೆ ಅರ್ಹ ರೈತರ ಗ್ರೀನ್ ಲೀಸ್ಟ್ ಪ್ರಕಟಿಸುವ ಅಗತ್ಯತೆ ಏನು? ಅಲ್ಲದೆ, 2018ರಲ್ಲಿ ಪ್ರಕಟಪಡಿಸಿದ ಸಾಲಮನ್ನಾ ಬಾಬ್ತು ಸಾಲ ಮನ್ನಾ ಅರ್ಹತೆಯ ನೈಜ ಕೃಷಿಕ ಸದಸ್ಯರೇ ಗ್ರೀನ್ ಲಿಸ್ಟ್​ನಲ್ಲಿ ಬಂದಿರುವವರಾಗಿದ್ದು, ಅನೇಕ ಸಣ್ಣ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಸರ್ಕಾರದ ಈ ನಿಲುವನ್ನು ಖಂಡಿಸಿ ಸೂಕ್ತ ಕಾನೂನು ಸಲಹೆ ಪಡೆದು ಇಂತಹ ಕೃಷಿಕರಿಗೆ ನ್ಯಾಯ ದೊರಕಿಸಲು ಒಕ್ಕೂಟದ ವತಿಯಿಂದ ಹೋರಾಟ ಮುಂದುವರಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಒಕ್ಕೂಟದ ಕಾರ್ಯದರ್ಶಿ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ. ಹೆಗಡೆ ಮತ್ತೀಹಳ್ಳಿ, ಸದಸ್ಯ ಸಂಘಗಳ ಪ್ರತಿನಿಧಿಗಳಾದ ವಿ.ಪಿ. ಹೆಗಡೆ ಕತಗಾಲ(ಉಪ್ಪಿನಪಟ್ಟಣ), ಜಿ.ವಿ. ಜೋಶಿ ಕಾಗೇರಿ, ಎನ್.ಎಸ್. ಹೆಗಡೆ ಕೋಟಿಕೊಪ್ಪ ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ ವಿ.ಎಂ. ಹೆಗಡೆ ಬಿಸ್ಲಕೊಪ್ಪ, ಜಿ.ಆರ್. ಹೆಗಡೆ ಬೆಳ್ಳೇಕೇರಿ, ವೀರೇಂದ್ರ ಗೌಡರ್, ವಿನಯಕುಮಾರ ಗೌಡ, ಜಿ.ಎನ್. ಹೆಗಡೆ ಬಕ್ಕಳ, ಜಿಲ್ಲಾ ಯೂನಿಯನ್ ನಿರ್ದೇಶಕ ಮಹೇಂದ್ರ ಭಟ್ಟ ಬಿಸ್ಲಕೊಪ್ಪ, ಟಿಆರ್​ಸಿ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಭಟ್ ಮಾವಿನಕೊಪ್ಪ ಹಾಗೂ ಪ್ರಾಥಮಿಕ ಪತ್ತಿನ ಸಂಘಗಳ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net