ಕಾನೂನು ತಜ್ಞ ಸಿಕೆಎನ್ ರಾಜ ನಿಧನ

CKN Raja
Published on

ಕಾನೂನು ತಜ್ಞ, ಮೈಸೂರು ವಿಶ್ವ ವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆ ಹಾಗೂ ತರಬೇತಿ ಸಂಸ್ಥೆಗಳಲ್ಲಿ ಕಾನೂನು ಪ್ರಾಧ್ಯಾಪಕರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಗರದ ಲಕ್ಷ್ಮೀಪುರಂ ನಿವಾಸಿ ಸಿಕೆಎನ್ ರಾಜ (91) ಬುಧವಾರ ನಿಧನರಾದರು.

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ವಾರದ ಹಿಂದೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸ ಲಾಗಿತ್ತು. ಚಿಕಿತ್ಸೆಗೆ ದೇಹ ಸ್ಪಂದಿಸದೆ ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ ಗಾಯತ್ರಿ, ಪುತ್ರ ಶ್ರೀಕಂಠ ಪ್ರಸಾದ್ ಇದ್ದಾರೆ. ಅಂತ್ಯಕ್ರಿಯೆ ಸಂಜೆ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯ ಚಿತಾಗಾರದಲ್ಲಿ ನೆರವೇರಿತು.

ಅಂತಾರಾಷ್ಟ್ರೀಯ ಕಾನೂನು ವಿಷಯದ ತಜ್ಞ

ಸಿಕೆಎನ್ ರಾಜ ಮೂಲತಃ ನಂಜನಗೂಡು ನಿವಾಸಿ. 19 ಫೆಬ್ರವರಿ 1932ರಲ್ಲಿ ಸಿ.ಕೆ. ನಂಜಪ್ಪ-ಸೀತಾಲಕ್ಷ್ಮಮ್ಮ ದಂಪತಿ ಪುತ್ರರಾಗಿ ಜನಿಸಿದರು. ಪ್ರಸ್ತುತ ನಗರದ ಲಕ್ಷ್ಮೀಪುರಂನಲ್ಲಿ ನೆಲೆಸಿದ್ದರು. ಸಾಂವಿಧಾನಿಕ ಕಾನೂನು ಹಾಗೂ ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ತಜ್ಞರಾಗಿದ್ದರು.

ವಿವಿಧ ಸಂಸ್ಥೆಗಳಲ್ಲಿ ಸೇವೆ

ರಾಜ ಅವರು 1953 ರಿಂದ 58ರವರೆಗೆ ವಕೀಲರಾಗಿ ಕಾರ್ಯನಿರ್ವಹಿಸಿದರು. ನಂತರ ಶಾರದವಿಲಾಸ ಕಾನೂನು ಕಾಲೇಜು, ಧಾರವಾಡ ವಿಶ್ವ ವಿದ್ಯಾಲಯ, ಮೈಸೂರು ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸುದೀರ್ಘ ಅವಧಿವರೆಗೆ ಕಾರ್ಯನಿರ್ವಹಿಸಿದರು. ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್, ಸೆನೆಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನಲ್ಲಿ 1992 ರಿಂದ 1998ರವರೆಗೆ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ನಗರದ ಆಡಳಿತ ತರಬೇತಿ ಸಂಸ್ಥೆ, ಕರ್ನಾಟಕ ಪೊಲೀಸ್ ಅಕಾಡೆಮಿ, ರಾಷ್ಟ್ರೀಯ ಕಾನೂನು ಶಾಲೆ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾನೂನಿಗೆ ಸಂಬಂಧಿಸಿದಂತೆ ಒಟ್ಟು 25 ಕೃತಿಗಳನ್ನು ರಚಿಸಿದ್ದಾರೆ. ಎರಡು ಕಾದಂಬರಿ ಹಾಗೂ 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net