ಸಣ್ಣಪುಟ್ಟ ಸಮಸ್ಯೆಗೆ ಹರತಾಳ ಏಕೆ?

25 smg 1
Published on

ಶಿವಮೊಗ್ಗ: ರಾಜ್ಯ ಸರ್ಕಾರ ನಿಮ್ಮ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸಲಿದೆ. ಸಣ್ಣಪುಟ್ಟ ಬೇಡಿಕೆಗಳನ್ನೇ ಮುಂದಿಟ್ಟುಕೊಂಡು ಮುಷ್ಕರ ನಡೆಸುವುದು ಹಾಗೂ ಪಾಲ್ಗೊಳ್ಳುವುದು ಸರಿಯಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಸರ್ಕಾರಿ ನೌಕರರ ಸಂಘ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ನಿಮ್ಮ ಕಾನೂನು ಬದ್ಧ ಬೇಡಿಕೆ ಈಡೇರಿಸಲು ಸರ್ಕಾರ ಸಿದ್ಧವಿದೆ. ಯಾವುದೇ ಸಮಸ್ಯೆ ಇರಲಿ, ರ್ಚಚಿಸಿ ಪರಿಹಾರ ಕಂಡುಕೊಳ್ಳಬೇಕು. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದರೆ ಸರ್ಕಾರ ಖಂಡಿತ ಈಡೇರಿಸುತ್ತದೆ ಎಂದರು.

ಕರೊನಾ, ಅತಿವೃಷ್ಟಿ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ನೌಕರರು ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಿದ್ದಾರೆ. ಸಮಸ್ಯೆಗಳನ್ನೂ ಪರಿಹರಿಸುವ ನಿಟ್ಟಿನಲ್ಲಿ ಸೇನಾನಿಗಳಾಗಿ ನಿರ್ವಹಿಸಿದ ಕಾರ್ಯವೈಖರಿ ಪ್ರಶಂಸನೀಯ. ಕಠಿಣ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮ ಸೇವೆ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.ಸಾರ್ವಜನಿಕರ ಕೆಲಸಗಳನ್ನು ಮಾಡುವ ಒಳ್ಳೆಯ ಅವಕಾಶ ನಿಮಗೆ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಕಷ್ಟಕ್ಕೊಳಗಾದವರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.

ಡಿಸಿ ಕೆ.ಬಿ.ಶಿವಕುಮಾರ್ ಮಾತನಾಡಿ, ಮಾಡುವ ಕೆಲಸ ಸಣ್ಣದಾದರೂ ಅದರಿಂದ ಆಗುವ ಬದಲಾವಣೆ ದೊಡ್ಡ ಮಟ್ಟದಲ್ಲಿ ಇರಲಿದೆ. ಹಾಗಾಗಿ ಸಣ್ಣದು-ದೊಡ್ಡದು ತಾರತಮ್ಯ ಮಾಡಬಾರದು ಎಂದರು.

ಕೇಂದ್ರ ಸಂಘದ ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ, ಮಹಾ ಪ್ರಧಾನ ಕಾರ್ಯದರ್ಶಿ ಜಗದೀಶ್​ಗೌಡಪ್ಪ ಪಾಟೀಲ, ಖಜಾಂಚಿ ಆರ್.ಶ್ರೀನಿವಾಸ್, ಎಚ್.ಎಸ್.ಹೇಮಲತಾ, ಸೌಹಾರ್ದ ಸಂಘಕ್ಕೆ ಜಾಗ ಕೊಟ್ಟ ನೀಲಮ್ಮ, ಜ್ಞಾನೇಶ್ವರ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ನೌಕರರ ಮಕ್ಕಳು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.

ಜಿಪಂ ಸಿಇಒ ಎಂ.ಎಲ್.ವೈಶಾಲಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ರಾಜ್ಯ ಸಂಘದ ಚಂದ್ರಶೇಖರ್ ನೂಕ್ಲಿ, ಪಿ.ಶ್ರೀನಿವಾಸ್, ಎಂ.ಎನ್.ರುದ್ರಪ್ಪ, ಸುರೇಶ್ ಬಾಬು, ರೋಷನಿ ಗೌಡ, ಯಶೋದಾ, ಸುಮತಿ, ಎ.ಎಸ್.ಹರ್ಷ, ಚಿತ್ರದುರ್ಗದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್​ಕುಮಾರ್, ಕಾರ್ಯದರ್ಶಿ ಐ.ಪಿ.ಶಾಂತರಾಜು, ಡಿ.ಬಿ.ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net