

ತುಮಕೂರು: ಇನ್ಮುಂದೆ ತುರ್ತು ಸಂದರ್ಭದಲ್ಲಿ ಪೊಲೀಸ್ ಠಾಣೆಗಳಲ್ಲೇ ಕಾನೂನು ಸೇವೆ ಲಭ್ಯವಾಗಲಿದೆ. ಜಿಲ್ಲೆಯ ಪ್ರಥಮ ಕಾನೂನು ಸೇವಾ ಕೇಂದ್ರ (ಲೀಗಲ್ ಏಡ್ ಕ್ಲಿನಿಕ್) ತಿಲಕ್‌ಪಾರ್ಕ್ ಠಾಣೆಯಲ್ಲಿ ಶುಕ್ರವಾರ ಆರಂಭವಾಯಿತು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಕಾನೂನು ಸೇವಾ ಕೇಂದ್ರ ಕಾರ್ಯನಿರ್ವಹಿಸಲಿದೆ. ಯಾವುದಾದರೂ ಪ್ರಕರಣಗಳಲ್ಲಿ ದಸ್ತಗಿರಿ ಆಗುವ ಆರೋಪಿಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರಿಗೆ ಕಾನೂನು ನೆರವು ಕ್ಲಿನಿಕ್‌ನಲ್ಲಿ ದೊರೆಯಲಿದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ನ್ಯಾಯಾಲಯಕ್ಕೆ ಬರುವ ಮೊದಲು ಸಾರ್ವಜನಿಕರು, ಈ ವ್ಯಾಜ್ಯ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ಬಗೆಹರಿಸಿಕೊಳ್ಳುವುದು ಕಾನೂನು ಸೇವಾ ಕೇಂದ್ರದ ಉದ್ದೇಶವಾಗಿದೆ. ಈ ಸೇವಾ ಕೇಂದ್ರದಲ್ಲಿ ಒಬ್ಬರು ನುರಿತ ವಕೀಲರು ಕಾನೂನು ಸಲಹೆಗಳನ್ನು ನೀಡಲಿದ್ದಾರೆ.
2 ದಿನ ಸೇವೆ ಲಭ್ಯ: ಕಾನೂನು ಸೇವಾ ಕೇಂದ್ರದಲ್ಲಿ ಮಂಗಳವಾರ ಹಾಗೂ ಶುಕ್ರವಾರ 2 ದಿನ ಕಾನೂನು ಸೇವೆ ಲಭ್ಯವಿರಲಿದೆ. ಠಾಣೆಗೆ ಬರುವ ಆರೋಪಿಗಳು, ಸಾರ್ವಜನಿಕರು ಸೂಕ್ತವಾದ ಕಾನೂನಿನ ಸಲಹೆ, ಮಾರ್ಗದರ್ಶನಗಳನ್ನು ಪಡೆದುಕೊಳ್ಳಬಹುದು. ಜತೆಗೆ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ನೆರವು ಸಿಗಲಿದೆ.
ತಾಲೂಕು ಕೇಂದ್ರಗಳಲ್ಲೂ ಕಾನೂನು ಕ್ಲಿನಿಕ್: ಎಲ್ಲ ತಾಲೂಕು ಕೇಂದ್ರಗಳಲ್ಲೂ ಕಾನೂನು ಕ್ಲಿನಿಕ್‌ಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಆಯ್ದ ಠಾಣೆಗಳಲ್ಲಿ ಸ್ಥಾಪಿಸಲಾಗುವುದು. ತುಮಕೂರು ಗ್ರಾಮಾಂತರ ಠಾಣೆ ಹಾಗೂ ಮಹಿಳಾ ಠಾಣೆಗಳಲ್ಲಿ ಶೀಘ್ರ ಕಾನೂನು ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು.
ಠಾಣೆಗೆ ಬರುವ ಆರೋಪಿಗಳಿಗೆ, ಸಾರ್ವಜನಿಕರಿಗೆ ಸಲಹೆ, ಮಾರ್ಗದರ್ಶನವು ಕಾನೂನು ಸೇವಾ ಕೇಂದ್ರದಲ್ಲಿ ಸಿಗಲಿದೆ. ಮುಂದಿನ ದಿನಗಳಲ್ಲಿ ಮಹಿಳಾ ಠಾಣೆ ಸೇರಿ ಸುಮಾರು 12 ಠಾಣೆಯಲ್ಲಿ ಸೇವಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಠಾಣೆಗೆ ಬರುವ ಪ್ರತಿಯೊಬ್ಬರಿಗೂ ಕಾನೂನಿನ ನೆರವು ಅಗತ್ಯ. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾನೂನಿನ ಬಗ್ಗೆ ಅನೇಕರಿಗೆ ತಿಳಿವಳಿಕೆ ಇರುವುದಿಲ್ಲ. ಹಾಗಾಗಿ, ಅವರು ಹಕ್ಕುಗಳಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಾನೂನು ಸೇವಾ ಕೇಂದ್ರ ಆರಂಭಿಸಲಾಗಿದೆ. ಕಾನೂನಿನ ನೆರವು ಅವಶ್ಯಕತೆ ಇರುವವರು ಇದರ ಸದುಪಯೋಗಪಡೆದುಕೊಳ್ಳಬೇಕು. ನ್ಯಾ.ಹಂಚಾಟೆ ಸಂಜೀವಕುಮಾರ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು