

ಮೈಸೂರು: ಮಹಿಳೆಯರು ಕಾನೂನು ಅರಿವು ಹೊಂದುವುದು ಇಂದಿನ ದಿನಗಳಲ್ಲಿ ಅತ್ಯಗತ್ಯ ಎಂದು ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಅಭಿಪ್ರಾಯಪಟ್ಟರು.
ವಿಪ್ರ ಪ್ರೊಫೆಷನಲ್ ಫೋರಂನ ಮಹಿಳಾ ವಿಭಾಗ ಮತ್ತು ಶ್ರೀಗುರು ರಾಘವೇಂದ್ರ ಸೇವಾ ಟ್ರಸ್ಟ್‌ನಿಂದ ಟಿ.ಕೆ.ಬಡಾವಣೆಯ ಶ್ರೀರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳೆ ಮತ್ತು ಕಾನೂನು ವಿಚಾರ ಸಂಕಿರಣದ ಶಿಖರೋಪನ್ಯಾಸ ನೀಡಿದರು. ಕಾನೂನು ಅರಿವು ಎಂಬುದು ಎಲ್ಲರಿಗೂ ಮುಖ್ಯ. ಅದರಲ್ಲೂ ಮಹಿಳೆಯರು ಕಾನೂನಿನ ಬಗ್ಗೆ ಸಮಗ್ರ ಜ್ಞಾನ ಹೊಂದಿರುವುದು ಇಂದು ಅತ್ಯಂತ ಅವಶ್ಯಕ. ಜ್ಞಾನ ಮತ್ತು ಅದರ ಮೂಲಕ ಪಡೆಯುವ ಅರಿವಿಗೆ ಸರಿಸಮನಾದದ್ದು ಜಗತ್ತಿನಲ್ಲಿ ಯಾವುದು ಇಲ್ಲ ಎಂದರು.
ಆಧುನಿಕ ಕಾಲ ಘಟ್ಟದಲ್ಲಿ ಎದುರಾಗುವಂತಹ ಹಲವು ರೀತಿಯ ಸಮಸ್ಯೆ, ಶೋಷಣೆ ದೌರ್ಜನ್ಯ ಮತ್ತು ಸಂದಿಗ್ಧ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಮಹಿಳೆಯರು ಕಾನೂನು ಸುವ್ಯವಸ್ಥೆ ಬಗ್ಗೆ ಜ್ಞಾನ ಹೊಂದಿರಬೇಕು ಎಂದು ಸಲಹೆ ನೀಡಿದರು.
ಯಾವುದೇ ಸಮಸ್ಯೆ ಬಂದ ನಂತರ ಅದಕ್ಕೆ ಉತ್ತರಗಳನ್ನು ಹುಡುಕುವುದು ಬದಲು ಸಮಸ್ಯೆಗಳು ಎದುರಾಗದಂತೆ ಸಾಕಷ್ಟು ಎಚ್ಚರ ವಹಿಸಿ ಸುಂದರವಾದ ಬದುಕು ರೂಪಿಸಿಕೊಳ್ಳಲು ಬೇಕಾದಂತಹ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಈ ನಿಟ್ಟಿನಲ್ಲಿ ಕಾನೂನು ವಿಷಯಗಳ ಬಗ್ಗೆ ಪ್ರಾಥಮಿಕ ಮಾಹಿತಿಗಳನ್ನಾದರೂ ನಾವು ಹೊಂದಿರಬೇಕು ಎಂದು ಹೇಳಿದರು.
ದುಷ್ಟ ಶಕ್ತಿಗಳಿಂದ ದೌರ್ಜನ್ಯ:
ಶತಮಾನಗಳಿಂದ ಮಹಿಳೆಗೆ ನಮ್ಮ ಸಮಾಜ ಹಾಕಿದಂತಹ ಚೌಕಟ್ಟುಗಳು ಈಗ ಇಲ್ಲ. ಆಕೆ ಯಾವ ಸಾಧನೆಯನ್ನಾದರೂ ಮಾಡುವಂತಹ ವಾತಾವರಣ ಈಗ ಇದೆ . ಆಕೆ ಉನ್ನತ ಮಟ್ಟದ ಶಿಕ್ಷಣ ಪಡೆದು, ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಸಮಾಜದ ಕೆಲವು ದುಷ್ಟಶಕ್ತಿಗಳು, ವಿಕೃತ ಮನಸ್ಸುಗಳಿಂದ ದೌರ್ಜನ್ಯ ಎದುರಿಸುತ್ತಿದ್ದಾಳೆ. ಅದನ್ನು ಎದುರಿಸಲು ಕಾನೂನು ಜ್ಞಾನ ಬೇಕು ಎಂದರು.
ನ್ಯಾಯಾಂಗದ ಹೊಣೆ:
ಯಾವ ನಾಡಿನಲ್ಲಿ ಮಾತೆಯರು ಆನಂದಕರ ವಾತಾವರಣದಲ್ಲಿ ಬದುಕುತ್ತಿರುತ್ತಾರೋ ಅಂತಹ ಮನೆಯ ಪ್ರತಿಯೊಬ್ಬರೂ ಸಮಾಜಕ್ಕೆ ಬೆಳಕಾಗುತ್ತಾರೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಾಂಪ್ರದಾಯಿಕ ಚೌಕಟ್ಟುಗಳ ನಡುವೆಯೂ ಅರ್ಥಪೂರ್ಣ ಜೀವನವನ್ನು ಕಟ್ಟಿ ಕೊಡಬೇಕಾದದ್ದು ನಮ್ಮ ಸಮಾಜದ ಕರ್ತವ್ಯ. ಈ ದಿಸೆಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಹೊಣೆಗಾರಿಕೆಯೂ ದೊಡ್ಡದಾಗಿದೆ ಎಂದು ಹೇಳಿದರು.
ವಿಪ್ರ ಪ್ರೊಫೆಷನಲ್ ಫೋರಂ ಅಧ್ಯಕ್ಷ ಯೋಗಾತ್ಮ ಶ್ರೀಹರಿ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ, ವಕೀಲ ಚಂದ್ರಶೇಖರ್, ಶ್ರೀಶಾರದಾ ಪಬ್ಲಿಕ್ ಸ್ಕೂಲ್ ಸಿಇಒ ಮಂಜುನಾಥ್ ಶ್ರೀವತ್ಸ, ಉದ್ಯಮಿ ಅಂಜಲಿ ಇತರರು ಇದ್ದರು. ಉಪನ್ಯಾಸದ ಬಳಿಕ ಪ್ರಶ್ನೋತ್ತರಗಳಿಗೆ ಶಿವಶಂಕರ್ ಉತ್ತರ ನೀಡಿದರು. ಹಲವು ಮಹಿಳಾ ಸಂಘ, ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು. ಮಹಿಳಾ ಉದ್ಯಮಿಗಳ ಗೃಹ ಉತ್ಪನ್ನ ಪ್ರದರ್ಶನ ಮತ್ತು ಮಾರಾಟ ಸಹ ಆಯೋಜಿಸಲಾಗಿತ್ತು.