ಬಾಲ್ಯದಲ್ಲೇ ಕಾನೂನು ಅರಿವು ಮೂಡಿಸಬೇಕು

ckm lwa
ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಿದ್ದ ಅಪರಾಧ ತಡೆಗಟ್ಟುವಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗೌರವ ಕಾರ್ಯದರ್ಶಿ ಎ.ಎಸ್.ಸೋಮ ಉದ್ಘಾಟಿಸಿದರು. ಎಸ್.ಎಸ್.ಮೇಟಿ, ಎನ್.ಕೇಶವಮೂರ್ತಿ, ಡಾ. ಗಣೇಶ್ ಇತರರಿದ್ದರು.
Published on

ಚಿಕ್ಕಮಗಳೂರು: ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಕಾನೂನಿನ ತಿಳಿವಳಿಕೆ ನೀಡಿದರೆ ದೇಶ ಸುಭಿಕ್ಷವಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎ.ಎಸ್.ಸೋಮ ಅಭಿಪ್ರಾಯಪಟ್ಟರು.

ಜಿಲ್ಲಾ ಕಾರಾಗೃಹದಲ್ಲಿ ಎಂಎಲ್‌ಎಂಎನ್ ಬಿಇಡಿ ಕಾಲೇಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಪರಾಧ ತಡೆಗಟ್ಟುವಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಅಪರಾಧವೆಸಗದಂತೆ ಬಾಲ್ಯದಿಂದಲೇ ಸನ್ನಡತೆಯತ್ತ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಶಿಕ್ಷಕರು ಹೊಂದಿರುತ್ತಾರೆ. ಆ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಸಮಯದಲ್ಲಿ ಹೆಚ್ಚು ಕಾನೂನು ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳಿಗೆ ಶಾಲಾ ಆಡಳಿತ ಮಂಡಳಿ ಮುಂದಾಗಬೇಕು ಎಂದರು.
ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಮರೆಯಾಗುತ್ತಿದೆ. ಶಾಲೆ ಭವಿಷ್ಯದ ಭದ್ರಬುನಾದಿ ಸ್ಥಾಪಿಸುವ ಕಾರ್ಖಾನೆಯಾಗಿದ್ದು ,ಆ ನಿಟ್ಟಿನಲ್ಲಿ ಶಿಕ್ಷಕರನ್ನು ಸೃಷ್ಟಿಸುವ ಸಂಸ್ಥೆಗಳು ಅತ್ಯಂತ ಸೂಕ್ಷ್ಮದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮಲೆನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಯಾರೊಬ್ಬರೂ ಅಪರಾಧದ ನಂಟು ಹೊಂದದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಕಾರಾಗೃಹದಲ್ಲಿರುವ ಬಂಧಿಗಳು ಯಾವುದೇ ಕಾರಣಕ್ಕೂ ಕೀಳರಿಮೆ ಹೊಂದಬಾರದು. ಶಿಕ್ಷೆಯ ಬಳಿಕ ಉತ್ತಮ ಜೀವನ ರೂಪಿಸಿಕೊಳ್ಳಲು ಚಿಂತನೆ ಹೊಂದಬೇಕು. ಸ್ವಾತಂತ್ರೃ ಪೂರ್ವದಿಂದಲೇ ಹಲವು ಹೋರಾಟಗಾರರು, ರಾಜಕೀಯ ಮುಖಂಡರು ಸೆರೆವಾಸ ಅನುಭವಿಸಿದ ಬಳಿಕವೇ ದೊಡ್ಡವ್ಯಕ್ತಿಗಳಾಗಿ ರೂಪುಗೊಂಡಿದ್ದಾರೆ. ಆ ನಿಟ್ಟಿನಲ್ಲಿ ಅಪರಾಧಿಗಳು ಬಿಡುಗಡೆ ಬಳಿಕ ಸಾತ್ವಿಕ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಮಾತನಾಡಿ, ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ವಾಸ್ತವ ಅತ್ಯಂತ ಅವಶ್ಯಕ. ಕೇವಲ ಕಲ್ಪನಾ ಲೋಕದಲ್ಲಿದ್ದು ವಾಸ್ತವ ಮರೆತರೆ ಯಾವುದೇ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ, ಎಂಎಲ್‌ಎಂಎನ್ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ. ಗಣೇಶ್, ಜೈಲರ್ ಎಂ.ಕೆ.ನೆಲಧರಿ, ವಕೀಲ ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net