ಕಾನೂನು ದುರುಪಯೋಗವಾಗದಂತೆ ಎಚ್ಚರವಹಿಸಿ: ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಸಲಹೆ

Legal Awareness Programme Mandya
Published on

ಮಂಡ್ಯ: ಸಾರ್ವಜನಿಕರ ಅನುಕೂಲಕ್ಕಾಗಿ ರಚಿಸಿರುವಂತಹ ಕಾನೂನು ದುರುಪಯೋಗವಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ‘ವಿಧಾನ್ ಸಮಾಧಾನ್’ ಅಂಗವಾಗಿ ಆಯೋಜಿಸಿದ್ದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗಾಗಿ ಬಹಳಷ್ಟು ಕಾನೂನುಗಳು, ಕಾಯ್ದೆಗಳು ಇವೆ. ಅವುಗಳನ್ನು ಅರಿತು ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ತಿಳಿಯಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಬಹಳ ಮುಂದಿದ್ದು, ಸಮಾಜದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದರೆ ಇಡೀ ಸಮಾಜವೇ ಬೆಳವಣಿಗೆ ಹೊಂದುತ್ತದೆ. ಲೈಂಗಿಕ ದೌರ್ಜನ್ಯ ಕಾಯ್ದೆ, ಅತ್ಯಾಚಾರ, ಅಪಹರಣ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಾನೂನು ಕಾಯ್ದೆಗಳ ಬಗ್ಗೆ ನುರಿತ ವ್ಯಕ್ತಿಗಳಿಂದ ಕಾರ್ಯದಲ್ಲಿ ತಿಳಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಂಡು ನಿಮ್ಮ ಸುತ್ತಮುತ್ತಲಿನ ಜನರುಗಳಿಗೆ ತಿಳಿಸುವ ಕೆಲಸ ಮಾಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಹೆಣ್ಣು ಬುದ್ದಿವಂತೆಯಾಗಿ ಬದುಕಿದರೆ ಮಾತ್ರ ಸಮಾಜ, ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ. ಭಾರತೀಯ ಸಮಾಜ ಎಲ್ಲ ರೀತಿಯಲ್ಲಿಯೂ ಮಹಿಳೆಯರಿಗೆ ಗೌರವ ನೀಡುತ್ತದೆ. ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಮತ್ತು ಇತರೆ ಕಾನೂನುಗಳ ಬಗ್ಗೆ ತಿಳಿದುಕೊಂಡು ನಿಮ್ಮ ಜ್ಞಾನದ ಅರಿವನ್ನು ಹೆಚ್ಚಿಸಿಕೊಳ್ಳಿ. ಇಂತಹ ಕಾರ್ಯಾಗಾರದ ಅವಶ್ಯಕತೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗಿದೆ ಎಂದರು.

ಹೆಣ್ಣು ತನ್ನ ಕುಟುಂಬ, ಸಮಾಜ ಹಾಗೂ ರಾಷ್ಟ್ರಕ್ಕೆ ಗೌರವವನ್ನು ನೀಡುತ್ತಾರೆ. ಅದರಂತೆ ಸಮಾಜದಲ್ಲಿ ನಡೆಯುತ್ತಿರುವ ಶಿಶು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹವನ್ನು ತಡೆಗಟ್ಟಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡಿ ಪ್ರತಿಯೊಬ್ಬರು ಸಹಕರಿಸಬೇಕು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ತಮ್ಮ ಅನುಭವ ಮಂಟಪದಲ್ಲಿ ಕಾಯಕ ತತ್ವವನ್ನು ಪ್ರಚಾರ ಮಾಡುವ ಮೂಲಕ ಮಹಿಳೆಯರಿಗೆ ಸಮಾನ ಅವಕಾಶವನ್ನು ಕೊಟ್ಟಿದ್ದರು. ಇಂದು ಸಮಾಜದಲ್ಲಿ ಮಹಿಳೆಯರು ದೃಢವಾಗಿ ನಿಂತಿದ್ದಾರೆ. ತನ್ನ ಗಂಡನಿಗೆ ಬುದ್ಧಿ ಹೇಳುವ ಜ್ಞಾನ, ಮಕ್ಕಳನ್ನು ಸರಿದಾರಿಯೆಡೆಗೆ ನಡೆಸಲು ಮಾರ್ಗದರ್ಶನ ನೀಡುತ್ತಾರೆ. ಸಮಾಜದಲ್ಲಿ, ಸಂಘ-ಸಂಸ್ಥೆಗಳಲ್ಲಿ ಭಾಗವಹಿಸುವ ಮೂಲಕ ಬುದ್ಧಿವಂತಿಕೆ ಹೊಂದಿದ್ದಾರೆ. ಮಹಿಳೆಯರು ನ್ಯಾಯಾಧೀಶೆ, ಅಧಿಕಾರಿ, ರಾಜಕಾರಣಿಯಾಗಿ ಎಲ್ಲ ಉನ್ನತ ಹುದ್ದೆಗಳಲ್ಲಿ ಪುರುಷರಿಗೆ ಸಮಾನವಾಗಿ ನಿಂತಿದ್ದಾರೆ ಎಂದು ಹೇಳಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಯಾವ ಸಮಾಜದಲ್ಲಿ ಅರ್ಥಪೂರ್ಣವಾಗಿರುತ್ತದೋ ಅಲ್ಲಿ ಜನರು ಕಷ್ಟಕ್ಕೆ ಸಿಲುಕುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಾರ್ಯಾಗಾರದಲ್ಲಿ ಕಾನೂನಿನ ಅರಿವಿನ ಲಾಭ ಪಡೆದು ತದನಂತರ ಬೇರೆಯವರಿಗೆ ತಿಳಿಸಬೇಕು. ಶಕ್ತಿಪೂರ್ವಕ ಸಮಾಜದಲ್ಲಿ ಶಕ್ತಿ ತುಂಬಬೇಕುಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಮಾತನಾಡಿ, ಜಿಲ್ಲೆಯಲ್ಲಿ ಮೊದಲನೇ ಬಾರಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಹಿಂದಿನ ಹಾಗೂ ಪ್ರಸ್ತುತ ಕಾಲಕ್ಕೂ ಮಹಿಳೆಯರ ಸ್ಥಿತಿಗತಿ ಬಹಳ ಸುಧಾರಿಸಿದೆ. ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕುಟುಂಬ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಸದರಿ ಕಾರ್ಯಾಗಾರವು ಅವರಿಗೆ ಉಪಯುಕ್ತವಾಗಿದೆ ಎಂದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ ಮತ್ತು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ರಾಜೇಂದ್ರ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್. ರಾಜಮೂರ್ತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಮೈಸೂರು ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಎಂ.ಟಿ.ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net