ಸುವ್ಯವಸ್ಥಿತ ಆಡಳಿತಕ್ಕೆ ಕಾನೂನು ಪಾಲನೆ : ನ್ಯಾಯಾಧೀಶ ಸಂದೇಶ ಕೆ. ಕರೆ

Act Awareness
ಕಾನೂನು ಅರಿವು ಕಾರ್ಯಕ್ರಮವನ್ನು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ ಕೆ.ಉದ್ಘಾಟಿಸಿದರು. ನವೀನ್ ಬಿ.ಕೆ, ಗಣೇಶ್ ಗೌಡ ಮೊದಲಾದವರಿದ್ದರು.
Published on

ಬೆಳ್ತಂಗಡಿ : ದೇಶದಲ್ಲಿ ಸುವ್ಯವಸ್ಥಿತ ಆಡಳಿತ ನಡೆಯಬೇಕಾದರೆ ಪ್ರತಿಯೊಬ್ಬರೂ ಸಾಂವಿಧಾನಿಕ ಕಾನೂನುಗಳನ್ನು ಪಾಲಿಸಲೇಬೇಕು ಎಂದು ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ ಕೆ. ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ಮತ್ತು ವಕೀಲರ ಸಂಘ ಬೆಳ್ತಂಗಡಿ ಹಾಗೂ ವಾಣಿ ಪದವಿ ಪೂರ್ವ ಕಾಲೇಜಿನ ಕಾನೂನು ಸಾಕ್ಷರತಾ ಸಂಘದ ಆಶ್ರಯದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಕ್ಸೋ ಕಾಯಿದೆಯ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ಕಾನೂನು ಅರಿವು ಹೊಂದಿರಬೇಕು. ಸಾರ್ವಜನಿಕವಾಗಿ ವ್ಯವಹರಿಸುವಾಗ ಜಾಗೃತರಾಗಿರಬೇಕು. ಲೈಂಗಿಕ ಅಪರಾಧಗಳಿಗೆ ಬಲಿಯಾಗದೆ ಸುಸ್ಥಿರ ಸಮಾಜದ ವಾರಸುದಾರರಾಗಬೇಕು ಎಂದರು.

ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ. ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ, ಹದಿಹರೆಯದ ವಿದ್ಯಾರ್ಥಿಗಳು ಲೈಂಗಿಕ ತೊಂದರೆಗೆ ಒಳಗಾದಾಗ ಅವರ ಸಂರಕ್ಷಣೆ ಮತ್ತು ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಕ್ಸೋ ಕಾರ್ಯ ನಿರ್ವಹಿಸುತ್ತದೆ. ಬಾಲ್ಯ ವಿವಾಹದಂತಹ ಸಮಸ್ಯೆಗಳಿಂದ ಮುಕ್ತರಾಗಿ ಸಂವಿಧಾನ ನೀಡಲ್ಪಟ್ಟ ಹಕ್ಕುಗಳ ಬಗ್ಗೆ ತಿಳಿದುಕೊಂಡು ವ್ಯವಹರಿಸಬೇಕು. ಇದರೊಂದಿಗೆ ಕರ್ತವ್ಯಕ್ಕೆ ಬದ್ಧರಾಗಿರಬೇಕು ಎಂದರು.

ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಗಣೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ. ಉಪಸ್ಥಿತರಿದ್ದರು. ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ಕಾನೂನು ಸಾಕ್ಷರತಾ ಸಂಘದ ಸಂಯೋಜಕಿ ಮೀನಾಕ್ಷಿ ವಂದಿಸಿದರು. ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net