

ಕಮಲಾಪುರ: ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ದುಡಿಮೆಗೆ ಹಚ್ಚುವುದು ಅಪರಾಧವಾಗಿದ್ದು, ಪುಟ್ಟ ಮಕ್ಕಳನ್ನು ಶಾಲೆಗೆ ಕಳಿಸಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.
ಬೆಳಕೋಟಾದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಅನುಗ್ರಹ ಸಮಗ್ರ ಗ್ರಾಮೀಣ ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ೬ ರಿಂದ ೧೪ ವರ್ಷದ ಒಳಗಿನ ಮಕ್ಕಳಿಗೆ ಕೆಲಸಕ್ಕೆ ಸೇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೇ ೧೪ ರಿಂದ ೧೮ ವರ್ಷದ ಮಕ್ಕಳಿಗೆ ಅಪಾಯಕಾರಿ ದುಡಿಮೆಯಲ್ಲಿ ಬಳಸಿಕೊಳ್ಳುವುದು ಸರಿಯಲ್ಲ. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ತಹಸೀಲ್ದಾರ್ ಮಹ್ಮದ್ ಮೋಸಿನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ, ಹಿರಿಯ ಕಾರ್ಮಿಕ ನಿರೀಕ್ಷಕಿ ಕವಿತಾ, ಕಮಲಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ನಾಗೇಂದ್ರ ಕೆ., ತಾಪಂ ಮಾಜಿ ಸದಸ್ಯ ಅಮೃತ ಗೌರೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಪ್ರಮುಖರಾದ ಗಿರೆಪ್ಪ ಶಾಖಾ, ಫತ್ರುಬಿ ಶಹಾ, ಡಾ.ಜಗದೇವಿ ರಾಜಕುಮಾರ, ದಿಲೀಪ್ ಹೊಳಕುಂದಾ, ಮಲ್ಲಿಕಾರ್ಜುನ ಮೂಲಗೆ, ಪ್ರೇಮಾ, ಸುನೀಲï ಮಾಳಗೆ ಇತರರಿದ್ದರು.
ಸಂತೋಷ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ಬಿ.ಕೆ. ನಿರೂಪಣೆ ಮಾಡಿದರು.