ಆದರ್ಶ ವಿದ್ಯಾಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ

12 KRN-1
ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿಯ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಬಿ.ಸಿ.ಅರವಿಂದ ಉದ್ಘಾಟಿಸಿದರು. ಎಸ್.ಚಂದನ್, ಕು.ಅಸ್ರೀನ, ಆರ್.ಕೃಷ್ಣಪ್ಪ, ಎಸ್.ರುಕ್ಮಣಿ ಇದ್ದರು.
Published on


ಕೆ.ಆರ್.ನಗರ: ಅಜ್ಞಾನ, ಬಡತನ ಹಾಗೂ ವಿದ್ಯೆ ಕೊರತೆಯಿಂದಾಗಿ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂದರೆ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ.ಅರವಿಂದ ಅಭಿಪ್ರಾಯಪಟ್ಟರು.

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮಲ್ಲಿ 8 ಸಾವಿರಕ್ಕೂ ಹೆಚ್ಚು ಕಾನೂನುಗಳಿವೆ. ಸಾಮಾನ್ಯ ಪ್ರಜೆಗೆ ನಿತ್ಯಕ್ಕೆ ಎಷ್ಟು ಬೇಕೋ ಅಷ್ಟು ತಿಳಿದುಕೊಂಡರೆ ಸಾಕು. 14 ವರ್ಷದೊಳಗಿನ ಮಕ್ಕಳು ಗಣಿಗಾರಿಕೆ, ಕಾರ್ಖಾನೆ ಮತ್ತು ಪ್ರಾಣಹಾನಿಯಂತಹ ಸ್ಥಳಗಳಲ್ಲಿ ಕೆಲಸ ಮಾಡುವಂತಿಲ್ಲ. ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ 32 ಬಾಲಕಾರ್ಮಿಕ ಪದ್ಧತಿ ಪ್ರಕರಣ ಕಂಡು ಬಂದಿದ್ದು, ಅದರಲ್ಲಿ ಸಾಲಿಗ್ರಾಮದಲ್ಲೇ ಎರಡು ಪ್ರಕರಣ ದಾಖಲಾಗಿದೆ. 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 1190 ಬಾಲಕಾರ್ಮಿಕ ಪ್ರಕರಣಗಳು ಕಂಡು ಬಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾತನಾಡಿ ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ತಲೆನೋವುವಾಗಿ ಪರಿಣಮಿಸಿದೆ. ಇಂತಹ ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಆಳವಾಗಿ ಬೇರೂರಿದ್ದು, ಇದನ್ನು ಹೋಗಲಾಡಿಸಲು ನ್ಯಾಯಾಲಯ, ಸರ್ಕಾರಿ ಸಂಸ್ಥೆಗಳು, ಸಂಘ-ಸಂಸ್ಥೆಗಳು ಕಾರ್ಯೋನ್ಮುಖವಾಗಿದೆ. ಜನರು ಶಿಕ್ಷಿತರಾಗುವುದರೊಂದಿಗೆ ಕುಟುಂಬದವರನ್ನೂ ಶಿಕ್ಷಿತರನ್ನಾಗಿಸಬೇಕಿದೆ. ಆಗ ಮಾತ್ರ ಇಂತಹ ಸಾಮಾಜಿಕ ಪಿಡುಗು ದೂರವಾಗಲಿದೆ ಎಂದು ಹೇಳಿದರು.

ಎಲ್ಲ ಮಕ್ಕಳು ವಿದ್ಯಾವಂತರಾಗಲಿ ಎಂಬ ಉದ್ದೇಶದಿಂದ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿ ಮಾಡಿದ್ದು, ಇದರ ಅನುಕೂಲವನ್ನು ಎಲ್ಲರೂ ಪಡೆಯಬೇಕಿದೆ. ಜತೆಗೆ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಹಾಗೂ ಶಾಲೆ ಬಿಟ್ಟ ಮಕ್ಕಳು ನಮ್ಮ ಸುತ್ತ ಕಂಡು ಬಂದರೆ ತಕ್ಷಣ ಶಿಕ್ಷಕರು ಅಥವಾ ಪಾಲಕಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಂದನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕು.ಅಸ್ರೀನ, ಆದರ್ಶ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಎಸ್.ರುಕ್ಮಣಿ, ಅಪರ ಸರ್ಕಾರಿ ವಕೀಲ ಕೆ.ವಿ.ಮಹೇಶ್, ಪ್ಯಾನೆಲ್ ವಕೀಲೆ ಕೆ.ಪ್ರಭಾವತಿ ಮಾತನಾಡಿದರು. ಇದೇ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅತಿಥಿ ಗಣ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸಿಆರ್‌ಪಿ ಈಶ್ವರ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಡಿ.ಸಿ.ರವಿ, ವಕೀಲರಾದ ರಾಧಿಕಾ, ನೇತ್ರಾವತಿ, ಕಾರ್ಮಿಕ ಇಲಾಖೆ ಸಿಬ್ಬಂದಿ ಚಂದ್ರಕಾಂತ್, ಶ್ರೀ ವೀರಭದ್ರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಟರಾಜ್, ತಿರುಮಲ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net