

ಮಡಿಕೇರಿ: ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಪೋಕ್ಸೋ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಹಾಗೂ ಮಕ್ಕಳಾ ರಕ್ಷಣಾ ಇಲಾಖೆಯಲ್ಲಿ ಪೋಲೀಸ್ ಸಿಬ್ಬಂದಿಯಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮತಿ ಶೆಟ್ಟಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮಾದಕ ವ್ಯಸನಿಗಳಾಗುತ್ತಿರುವುದಕ್ಕೆ ಕಾರಣ ಹಾಗೂ ಲೈಂಗಿಕ ದೌರ್ಜನ್ಯ ವಿರುದ್ಧ ಕಾನೂನು ಅರಿವು, ಪೋಕ್ಸೋ ಕಾಯಿದೆಯ ಕುರಿತು ಸಮಗ್ರವಾಗಿ ಮಾಹಿತಿಯನ್ನು ಸುಮತಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದರೊಂದಿಗೆ ಸನ್ನಡತೆ, ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಸಂಸ್ಥೆಯ ಹಿಂದಿ ಉಪನ್ಯಾಸಕ ರಾಜ ಸುಂದರಂ ಸ್ವಾಗತಿಸಿದರೆ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸ್ನೇಹಾ ನಿರೂಪಿಸಿ, ತ್ರಿಷಾ ವಂದಿಸಿದರು. ಮುಖ್ಯ ಶಿಕ್ಷಕಿ ಕೆ.ಯು.ರೀಟಾ, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.