ಸಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಮುಖ್ಯ ತಳಹದಿ

IMG-20250228-WA0301
ಕೆ.ಆರ್.ಪೇಟೆ ತಾಲೂಕಿನ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಸುಧೀರ್ ಉದ್ಘಾಟಿಸಿದರು. ದೇವರಾಜು, ಪ್ರಸನ್ನಕುಮಾರ್, ವೈ.ಕೆ.ತಿಮ್ಮೇಗೌಡ, ನಾಗೇಗೌಡ ಇತರರಿದ್ದರು.
Published on

ಕೆ.ಆರ್.ಪೇಟೆ: ಜಾತಿ, ಮತ, ಪಂಥಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ಸಾಮಾಜಿಕ ನ್ಯಾಯ ಮುಖ್ಯ ತಳಹದಿಯಾಗಿದೆ ಎಂದು ಪಟ್ಟಣದಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಸುಧೀರ್ ಹೇಳಿದರು.

ತಾಲೂಕಿನ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಮುಖ್ಯ ತಳಹದಿಯೇ ಸಾಮಾಜಿಕ ನ್ಯಾಯವಾಗಿದೆ. ಬಡವ, ಶ್ರೀಮಂತ ಎಂಬ ಬೇಧ-ಭಾವವಿಲ್ಲದಂತೆ ಎಲ್ಲರೂ ಒಂದಾಗಿ ನೆಮ್ಮದಿಯ ಜೀವನ ನಡೆಸಲು ಸಾಮಾಜಿಕ ನ್ಯಾಯವು ಸಂವಿಧಾನ ನಮಗೆ ಕಾನೂನುಬದ್ಧವಾಗಿ ನೀಡಿರುವ ಕೊಡುಗೆಯಾಗಿದೆ. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸಂವಿಧಾನದ ಅಡಿಯಲ್ಲಿ ರೂಪಿತವಾಗಿರುವ ಕಾನೂನು ಹಾಗೂ ಸಾಮಾಜಿಕ ನ್ಯಾಯದ ಫಲದಿಂದಾಗಿ ಜನರು ಇಂದು ಸದೃಢ, ಸ್ವಾಭಿಮಾನಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಅಪರ ಸಿವಿಲ್ ನ್ಯಾಯಾಧೀಶ ದೇವರಾಜು ಮಾತನಾಡಿ, ಸಂವಿಧಾನದ ಆಶಯದ ಫಲವೇ ಸಾಮಾಜಿಕ ನ್ಯಾಯವಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳು ಸಂವಿಧಾನ ನಮಗೆ ನೀಡಿರುವ ಕೊಡುಗೆಯಾಗಿವೆ ಎಂದು ಹೇಳಿದರು.

ಗವಿಮಠ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಸನ್ನಕುಮಾರ್ ಮಾತನಾಡಿ, ಸಾಮಾಜಿಕ ನ್ಯಾಯವು ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿದೆ. ನಾವು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಡಿಯಲ್ಲಿಯೇ ಜೀವನ ನಡೆಸುತ್ತಿರುವುದರಿಂದ ಸಾಮಾಜಿಕ ನ್ಯಾಯದ ಪಾಲನೆ ಅತಿ ಅಗತ್ಯವಾಗಿದೆ. ಬಸವಾದಿ ಶರಣರು ಸೇರಿದಂತೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಮಾನವ ಧರ್ಮದ ಪಾಲನೆ ಹಾಗೂ ಅನುಷ್ಠಾನಕ್ಕಾಗಿ ಹೋರಾಟ ನಡೆಸಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ, ಅಪರ ಸರ್ಕಾರಿ ಅಭಿಯೋಜಕ ಜಿ.ಸುರೇಂದ್ರ, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಮಲ್ಲಿಕಾರ್ಜುನ್ ಸ್ವಾಮಿ ಮಾತನಾಡಿದರು. ಅಪರ ಸಿವಿಲ್ ನ್ಯಾಯಾಧಿಶರಾದ ಶಕುಂತಲಾ, ಅರ್ಪಿತಾ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎಸ್.ಪುರುಷೋತ್ಯಮ್, ಕಾರ್ಯದರ್ಶಿ ಮಂಜೇಗೌಡ, ಖಜಾಂಚಿ ಪ್ರಸನ್ನಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net