ಬೌದ್ಧಿಕ ಸ್ವತ್ತಿಗೆ ಸಂಬಂಧಿಸಿದಂತೆ ಕಾನೂನು ಅರಿವು ಅಗತ್ಯ: ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಸಲಹೆ

Published on

ಮೈಸೂರು: ತಂತ್ರಜ್ಞಾನವು ಬಹಳ ಮುನ್ನಡೆ ಸಾಧಿಸಿರುವ ಈ ಕಾಲಘಟ್ಟದಲ್ಲಿ ಬೌದ್ಧಿಕ ಸ್ವತ್ತಿನ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಸಲಹೆ ನೀಡಿದರು.

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ.ಚಿಕ್ಕಬೋರಯ್ಯ ಸ್ಮಾರಕ ಆಯೋಜಿಸಿದ್ದ ಒಂದು ದಿನದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ವ್ಯವಹಾರ ಸಮರ್ಥವಾಗಿ ಮುಂದುವರಿಯಲು ಪೇಟೆಂಟ್ ಮತ್ತು ಗ್ರಂಥಸ್ವಾಮ್ಯಗಳ ರಕ್ಷಣೆಯು ಮೂಲಭೂತ ಹಕ್ಕಾಗಿದೆ. ಈ ಹಿನ್ನೆಲೆಯಲ್ಲಿ ಬೌದ್ಧಿಕ ಸ್ವತ್ತಿನ ಹಕ್ಕು ಸಂರಕ್ಷಣೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಹಿಂದೆ ರಾಜ, ಮಹಾರಾಜರ ಆಳ್ವಿಕೆಯಲ್ಲಿಯೂ ಇದನ್ನು ಕಾಣಬಹುದು ಎಂದರು.

ಕ್ರಿ.ಪೂ. 2700ರಲ್ಲಿಯೇ ಚೀನಾದಲ್ಲಿ ಒಂದು ವಸ್ತುವಿಗೆ ಚಕ್ರವರ್ತಿಯ ಹೆಸರಿನಿಂದಲೋ ಅಥವಾ ಆ ವಸ್ತುವಿನ ತಯಾರಕನ ಹೆಸರಿನಲ್ಲಿಯೋ ವಿಶಿಷ್ಟವಾದ ಚಿಹ್ನೆ ಬಳಸಲಾಗುತ್ತಿತ್ತು. ಮುಂದೆ ಸುಮಾರು ಕ್ರಿ.ಶ. ಎರಡನೇ ಶತಮಾನದಲ್ಲಿ ಗ್ರೀಕರು ಮತ್ತು ರೋಮನ್ನರೂ ಸರಕುಗಳ ತಯಾರಕರ ಹೆಸರಿನಲ್ಲಿ ಗುರುತಿನ ಮುದ್ರೆಗಳನ್ನು ಬಳಸುತ್ತಿದ್ದ ವ್ಯವಸ್ಥೆಯನ್ನು ಕಾಣಬಹುದಾಗಿದೆ ಎಂದರು.

ಕ್ರಿ.ಶ. 1266ರಲ್ಲಿ ಇಂಗ್ಲಿಷ್ ಸಂಸತ್ತು ಪ್ರತಿಯೊಬ್ಬ ಬೇಕರಿ ಮಾಲೀಕನೂ ಒಂದೊಂದು ವಿಶಿಷ್ಟ ಚಿಹ್ನೆಗಳನ್ನು ತಾನು ತಯಾರಿಸಿದ ಬ್ರೆಡ್ಡುಗಳ ಮೇಲೆ ಬಳಸಬೇಕು ಎಂದು ಕಾನೂನನ್ನು ತಂದಿತು. 14 ಹಾಗೂ 15ನೇ ಶತಮಾನಗಳಲ್ಲಿ ಚಿಹ್ನೆಗಳ ಜತೆ ಲೋಗೋಗಳನ್ನು ಬಳಸುವ ವ್ಯವಸ್ಥೆ ಜನಿಸಿತು ಎಂದು ವಿವರಿಸಿದರು.

ಈ ಎಲ್ಲದರ ಪರಿಣಾಮವಾಗಿ ಈಗ ನಾವು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿಯೂ ಪೇಟೆಂಟ್ ಕಾನೂನಿನ ಅವಶ್ಯಕತೆ ಮತ್ತು ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ನ್ಯಾಯಶಾಸ್ತ್ರಜ್ಞರು ಬೌದ್ಧಿಕ ಸ್ವತ್ತಿನ ಕಾನೂನುಗಳನ್ನು ರಾಷ್ಟ್ರಗಳ ನವ ಸಂಪತ್ತು ಎನ್ನುವುದಾಗಿ ಉದ್ಘೋಷಿಸಿದ್ದಾರೆ ಎಂದರು.

ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಇಂಗ್ಲಿಷ್ ಸಂದೇಶ ಭಾಷೆಯ ಅಕ್ಷರಗಳನ್ನು ಯುವ ಜನಾಂಗ ತುಂಡರಿಸುತ್ತಿದ್ದು, ನಿಜವಾದ ಪದಗಳೇ ಮರೆತು ಹೋಗುವಂತಿವೆ. ಇದೊಂದು ಚಿಂತಾಜನಕ ಬೆಳವಣಿಗೆ ಎಂದು ವಿಷಾದಿಸಿದರು.

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ. ದಾಖಲಾಗುವ ಪ್ರಕರಣಗಳಲ್ಲಿ ಶೇ.60ರಷ್ಟು ಸೈಬರ್ ಅಪರಾಧಗಳ ಕುರಿತಾಗಿಯೇ ಇವೆ. ಹೀಗಿರುವಾಗ ಕೃತಕ ಬುದ್ಧಿಮತ್ತೆಯ ಬಳಕೆ ಯಾವ ಮಟ್ಟದಲ್ಲಿ, ಎಷ್ಟು ಪ್ರಮಾಣದಲ್ಲಿ ಇರಬೇಕು ಎನ್ನುವುದರ ಬಗೆಗೆ ಸಹ ಗಂಭೀರವಾಗಿ ಚರ್ಚಿಸಬೇಕಾದ ಅಗತ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಕಾನೂನು ವೃತ್ತಿ ಘನತೆಯಿಂದ ಕೂಡಿರುವುದರಿಂದ ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ದಿನಕ್ಕೊಂದರಂತೆ ತೀರ್ಪುಗಳನ್ನು ಓದಬೇಕು. ವೃತ್ತಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಉತ್ತಮವಾದ ಕೌಶಲ, ಮಾತಿನ ಕಲೆಯನ್ನು ಬೆಳೆಸಿಕೊಳ್ಳಬೇಕು. ಹೀಗೆ ಶ್ರಮಪಟ್ಟರೆ ಮಾತ್ರ ಈ ವೃತ್ತಿಯಲ್ಲಿ ಗೆಲುವು ಸಾಧ್ಯ ಮತ್ತು ಉತ್ತಮ ವಕೀಲರೂ, ನ್ಯಾಯಾಧೀಶರೂ ನಿಮ್ಮಿಂದ ಹೊರಬರಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕೋಲ್ಕತ್ತ ಎನ್‌ಯುಜೆಎಸ್ ಕಾನೂನು ಪ್ರಾಧ್ಯಾಪಕ ಪ್ರೊ.ಎನ್.ಎಸ್.ಶ್ರೀನಿವಾಸುಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಖಜಾಂಚಿ ಶ್ರೀಶೈಲ ರಾಮಣ್ಣನವರ್, ವಿವಿಎಲ್‌ಸಿ ಅಧ್ಯಕ್ಷ ಎಸ್.ಶಿವಲಿಂಗಯ್ಯ, ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೀಪು, ಕಾರ್ಯಕ್ರಮ ಸಂಯೋಜಕ ಡಾ.ಎನ್.ಜೆ.ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net