ಗ್ರಾಮೀಣರಿಗೆ ಕಾನೂನು ಅರಿವು ಅವಶ್ಯ

FotoJet
Published on

ಕೊರಟಗೆರೆ : ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವು ಮೂಡಿಸುವುದು ಅತ್ಯಂತ ಅಗತ್ಯ. ಜನರು ಕಾನೂನು ತಿಳಿದರೆ ತಮ್ಮ ಹಕ್ಕುಗಳಿಗಾಗಿ ಧೈರ್ಯದಿಂದ ನಿಲ್ಲಬಹುದು ಎಂದು ಜಟ್ಟಿ ಅಗ್ರಹಾರ ಗ್ರಾಪಂ ಅಧ್ಯಕ್ಷ ಸಿ.ಡಿ.ಪ್ರಭಾಕರ್​ ಹೇಳಿದರು.

ಜಟ್ಟಿ ಅಗ್ರಹಾರ ಪಂಚಾಯಿತಿಯಿಂದ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು, ಅಂಗವಿಕಲರು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರು ಹಾಗೂ ಬಡತನ ರೇಖೆಗಿಂತ ಕೆಳಗಿರುವವರು ಕಾನೂನುಗಳಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಮುಂದೆ ಗ್ರಾಮಗಳಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆಯಾದರೆ ರೈತರು, ಬಡವರು, ಕಾರ್ಮಿಕರು ತಮ್ಮ ಹಕ್ಕಿಗಾಗಿ ನೇರವಾಗಿ ಹೋರಾಡಲು ಸಾಧ್ಯವಾಗುತ್ತದೆ ಎಂದರು.

ಸ್ವಚ್ಛತೆ, ಮೂಲ ಸೌಕರ್ಯ, ಕುಡಿಯುವ ನೀರು, ವಸತಿ ಇವು ಜನರ ಮೂಲ ಹಕ್ಕುಗಳು ಎಂಬ ಅರಿವು ಗ್ರಾಮೀಣ ಜನತೆಗೆ ಮೂಡಿಸಬೇಕು. ಜನರಿಗೆ ಕಾನೂನು ತಿಳಿದರೆ ಅವರು ತಾವೇ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಶಕ್ತಿ ಪಡೆಯುತ್ತಾರೆ ಎಂದರು.

ಕಾನೂನು ಸಲಹೆಗಾರ ವಕೀಲ ಟಿ.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಕಾನೂನು ನಮ್ಮ ನೆರಳಿನಂತೆಯೇ ನಮ್ಮೊಂದಿಗಿರಬೇಕು. ಹೇಗೆ ನೆರಳು ನಮ್ಮನ್ನು ಯಾವಾಗಲೂ ಹಿಂಬಾಲಿಸುತ್ತದೋ, ಅದೆ ರೀತಿ ಕಾನೂನು ಸಹ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರಬೇಕು ಎಂದು ಹೇಳಿದರು.

ವಕೀಲರ ಸಂಘದ ಕಾರ್ಯದರ್ಶಿ ರಾಜು, ಪಿಡಿಒ ರಂಗನರಸಯ್ಯ, ಕಾರ್ಯದರ್ಶಿ ಮುನಿಯಯ್ಯ, ಉಪಾಧ್ಯಕ್ಷೆ ಸರಸ್ವತಿ ಮಂಜುನಾಥ್​, ಸದಸ್ಯರಾದ ದಾಕ್ಷಾಯಣಮ್ಮ, ಕರಿಯಣ್ಣ, ರಾಗಿಣಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net