ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳು

04 njd news 01
ಅಂತಾರಾಷ್ಟ್ರೀಯ ವಿಶೇಷಚೇತನರ ದಿನದ ಅಂಗವಾಗಿ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು. ಆರ್.ಅಶ್ವಿನ್, ಕೆ.ಎಸ್.ಭವ್ಯಶ್ರೀ, ಸಜ್ಜನ ರಾವ್ ಬೋಬಡೆ, ಪಿ.ರಂಗಸ್ವಾಮಿ ಇತರರು ಇದ್ದರು.
Published on

ನಂಜನಗೂಡು: ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸ್ವಾವಲಂಬಿ ಬದುಕಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ.ಜಿ. ಸತೀಶ ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಬಿಳಿಗೆರೆ ಸಹಯೋಗದಲ್ಲಿ ಬುಧವಾರ ತಾಲೂಕಿನ ಗೋಳೂರು ಗ್ರಾಮದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಮತ್ತು ಅಂತಾರಾಷ್ಟ್ರೀಯ ವಿಶೇಷಚೇತನರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಂಡನಿಂದ ಕಿರುಕುಳ, ದಬ್ಬಾಳಿಕೆ, ದೌರ್ಜನ್ಯದಂತಹ ಅಮಾಯಕ ಕೃತ್ಯಗಳು ನಡೆದರೆ ಅವರು ನ್ಯಾಯಾಲಯಕ್ಕಾಗಲಿ, ಪೊಲೀಸ್ ಇಲಾಖೆಗಾಗಲಿ ದೂರು ನೋಡಿದರೆ ಅಂತಹವರ ವಿರುದ್ಧ ಕಲಂ 120 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಲಾಗುವುದು. ಮಹಿಳೆಯರ ರಕ್ಷಣೆಗೆ ಉಚಿತ ಕಾನೂನು ನೆರವು ನೀಡಲಾಗುವುದು. ಪುರಷರಂತೆ ಮಹಿಳೆಯರು ಕೂಡ ಸಮಾನರು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆ, ಕಾಯ್ದೆಗಳನ್ನು ಜಾರಿಗೊಳಿಸಿವೆ. ಮಹಿಳೆಯರಂತೆ ಪುರುಷರಿಗೂ ಉಚಿತ ಕಾನೂನು ನೆರವು ನೀಡಲಿದೆ. ಆದರೆ, ಉಚಿತ ಕಾನೂನು ನೆರವು ಪಡೆಯುವ ವ್ಯಕ್ತಿ ಮೂರು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು. ಇದು ಎಸ್ಸಿ, ಎಸ್ಟಿ ಸಮುದಾಯದವರಿಗೂ ಅನ್ವಯಿಸುತ್ತದೆ ಎಂದರು.

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಸಮಾಜದಲ್ಲಿ ಇದೊಂದು ಕೆಟ್ಟ ಪದ್ಧತಿಯಾಗಿದ್ದು, ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಕಾಡುತ್ತಿದೆ. ಬಡತನ, ಅನಕ್ಷರಸ್ಥರು, ನಮ್ಮ ಹಳೆ ಸಂಬಂಧ ಅಂತ ಏನೇನೋ ಕಥೆ ಕಟ್ಟಿ ಪ್ರಪಂಚದ ಜ್ಞಾನವೇ ಗೊತ್ತಿಲ್ಲದ ಮಕ್ಕಳಿಗೆ ವಿವಾಹ ಮಾಡುವ ಮೂಲಕ ಅವರ ಭವಿಷ್ಯದ ಉಜ್ವಲ ಬದುಕನ್ನು ನಾಶ ಮಾಡಬಾರದು. ಬಾಲ್ಯ ವಿವಾಹ ಮಾಡಿಕೊಂಡವರು, ಮಾಡುವವರು, ಪುರೋಹಿತರು ಸೇರಿದಂತೆ ಇದಕ್ಕೆ ಉತ್ತೇಜನ ನೀಡುವವರಿಗೂ 1 ವರ್ಷ ಜೈಲು ಹಾಗೂ 2 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಹಾಗಾಗಿ, ಬಾಲ್ಯ ವಿವಾಹಕ್ಕೆ ಯಾರೂ ಪ್ರೋತ್ಸಾಹಿಸಬಾರದು ಎಂದು ತಿಳಿಸಿದರು.

ಅಂಗವಿಕರನ್ನು ಯಾವುದೇ ಕಾರಣಕ್ಕೂ ಕೀಳಾಗಿ ಕಾಣಬಾರದು, ಅವರಲ್ಲಿಯೂ ಸಾಧನೆ ಮಾಡುವ ಲಕ್ಷಣಗಳು, ಛಲ ಇದ್ದೇ ಇರುತ್ತದೆ. ಅವರಿಗೆ ಪ್ರೋತ್ಸಾಹ ಹಾಗೂ ಆತ್ಮ ವಿಶ್ವಾಸ ಮೂಡಿಸಿದರೆ ಸಾಮಾನ್ಯರಂತೆ ಸಾಧನೆ ಮಾಡಬಲ್ಲರು. ಅವರನ್ನು ಬೆದರಿಸುವುದು, ಅವಮಾನ ಮಾಡುವುದು, ಬಲಪ್ರಯೋಗ ಮಾಡುವುದು, ಅವರ ಸವಲತ್ತುಗಳನ್ನು ಮೋಸದಿಂದ ಬೇರೆಯವರು ಪಡೆದುಕೊಳ್ಳುವುದು, ತೊಂದರೆ ಕೊಡುವುದನ್ನು ಮಾಡಿದರೆ 6 ತಿಂಗಳಿಂದ 5 ವರ್ಷದವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಎಚ್ಚರಿಸಿದರು.

ಆರ್.ಅಶ್ವಿನ್, ಸಿಡಿಪಿಒ ಕೆ.ಎಸ್.ಭವ್ಯಶ್ರೀ, ಪ್ರಭಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಜ್ಜನ ರಾವ್ ಬೋಬಡೆ, ಪಿ.ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜೆ.ಉಷಾ, 2ನೇ ಅಪರ ಸಿವಿಲ್ ನ್ಯಾಯಾಧೀಶೆ ಜೆ.ಶಶಿಕಲಾ, ವಕೀಲರ ಸಂಘದ ಅಧ್ಯಕ್ಷ ಹನಿಯಂಬಳ್ಳಿ ಮಹದೇವಸ್ವಾಮಿ, ಉಪಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಎಂ.ಕೆ.ಬಸವಣ್ಣ, ಡಾ. ಅರ್ಚನಾ, ವಕೀಲರಾದ ಮುತ್ತುರಾಜು, ಸರಸ್ವತಿ, ಗ್ರಾಪಂ ಸದಸ್ಯ ಮುದ್ದುಮಾದಶೆಟ್ಟಿ, ಮುಖಂಡರಾದ ನಂಜಪ್ಪ, ಮಹದೇವು, ಸತೀಶ, ರೇಣುಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net