

ಹೊಸಕೋಟೆ: ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಕಾನೂನು ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಬಿ. ಗಿರೀಶ್ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶಿಶು ಅಭಿವೃದ್ಧಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಜನರಿಗೆ ಕಾನೂನು ಬಗ್ಗೆ ಅರಿವು ಕಡಿಮೆ. ಅಂತಹ ಪ್ರದೇಶಗಳಿಗೆ ತೆರಳಿ ದಿನನಿತ್ಯ ಪಾಲಿಸಬೇಕಾದ ಕಾನೂನು ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಸುಬ್ರಮಣಿ ಮಾತನಾಡಿ, ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಿ, ಮಕ್ಕಳು ಅಪಘಾತ ಮಾಡಿದರೆ, ಮಕ್ಕಳ ಪಾಲಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪಾಲಕರು ಎಚ್ಚರವಹಿಸಬೇಕು ಎಂದರು,
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ ಮಾತನಾಡಿ, ಕರೊನಾ ಸಂದರ್ಭದಲ್ಲಿ ಬಾಲ್ಯ ವಿವಾಹ ನೆಡೆಯುವ ಬಗ್ಗೆ ಮಾಹಿತಿ ಬಂದಿದ್ದು, ಇಲಾಖೆಯಿಂದ ಅಂತಹ ವಿವಾಹ ನಿಲ್ಲಿಸಲಾಗಿದೆ, ಮುನ್ನೆಚ್ಚರಿಕೆಯಿಂದ ಅಂತಹ ಮಾಹಿತಿ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎಚ್.ಎಂ. ಆನಂದ್ ಕುಮಾರ್, ಜನ ಸಾಮಾನ್ಯರಿಗಿರುವ ಅವಶ್ಯಕ ಕಾನೂನು ಹಾಗೂ ಬಿ.ಎಂ. ಅನಂತ ಪ್ರಭಾಕರ್, ಬಾಲಾಪರಾಧಿ ನ್ಯಾಯ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎಂ. ಹನುಮಂತರಾಯಪ್ಪ, ಖಜಾಂಚಿ ಎಸ್. ಶ್ರೀನಿವಾಸ್, ಅಂಗನವಾಡಿ ಮೇಲ್ವಿಚಾರಕಿಯರಾದ ಲತಾಂಜಲಿ, ಪ್ರಭಾ ಹಾಜರಿದ್ದರು.