ವಿಕಲಾಂಗರಿಗೆ ಕಾನೂನು ನೆರವು

4
Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಅಂಗವಿಕಲ ಮಕ್ಕಳ ಹಕ್ಕುಗಳನ್ನು ರಕ್ಷಿಸಲು 2016ರಲ್ಲಿ ಕಾಯ್ದೆ ಜಾರಿಗೆ ಬಂದಿದ್ದು, ಎಲ್ಲರಂತೆ ವಿಕಲಾಂಗರೂ ತಮ್ಮ ಹಕ್ಕುಗಳನ್ನು ಹೊಂದಿದ್ದಾರೆ. ಅವರ ಹಕ್ಕುಗಳ ರಕ್ಷಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಉಚಿತ ಕಾನೂನು ನೆರವು ಸಿಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್​ ನ್ಯಾಯಾಧೀಶ ಸುನಿಲ ಎಸ್​.ಹೊಸಮನಿ ತಿಳಿಸಿದರು.


ಬಸವಶ್ರೀ ವಿದ್ಯಾಸಂಸ್ಥೆಯಿಂದ ಬುಧವಾರ ನಗರದ ಅಂತರಗಂಗೆ ಅಂಗವಿಕಲ ಮಕ್ಕಳ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್​ಎಸ್​ಎಸ್​ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ವಿಕಲಾಂಗರ ಸಂರಕ್ಷಣೆಗಾಗಿ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಜತೆಗೆ ಅವರ ಅಭಿವೃದ್ಧಿಗೂ ಹಲವು ಯೋಜನೆಗಳನ್ನು ನೀಡಿದೆ. ಈ ಹಕ್ಕು ಮತ್ತು ಯೋಜನೆಗಳ ಕುರಿತು ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.
ಹಿರಿಯ ನಾಗರಿಕರ ರಕ್ಷಣೆಗೆ 2007ರಲ್ಲಿ ಕಾನೂನು ಜಾರಿಗೆ ಬಂದಿದೆ. ಮಕ್ಕಳಿಂದ, ಕುಟುಂಬದಿಂದ ದೌರ್ಜನ್ಯಕ್ಕೆ ಒಳಗಾಗಿ ಮನೆಯಿಂದ ಹೊರಗೆ ಹಾಕಿಸಿಕೊಂಡು ಜೀವನ ನಡೆಸಲು ಕಷ್ಟಪಡುವ ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುತ್ತಾರೆ. ಅವರಿಗೆ ಜೀವನಾಂಶ ಪಡೆಯಲು, ವಸತಿ ಸೌಲಭ್ಯ ಪಡೆಯಲು ಸಹಾಯಕ ಉಪವಿಭಾಗಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಎನ್ನೆಸ್ಸೆಸ್​ ವಿದ್ಯಾರ್ಥಿಗಳು ಅರಿವು ಮೂಡಿಸಬೇಕು ಎಂದರು.


ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಎನ್ನೆಸ್ಸೆಸ್​ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಶ್ರಮದಾನ ಮಾಡಬೇಕು. ಗಾಂಧೀಜಿಯವರ ಆದರ್ಶದಂತೆ ಈ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಈ ಮಕ್ಕಳಿಗೆ ನೆರವು ನೀಡಿ ಎಂದು ಕಿವಿಮಾತು ಹೇಳಿದರು. 120 ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಕ್ಕಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net