

ಮುಂಡರಗಿ: ಕೆಲ ಸರ್ಕಾರಿ ಸೊಸೈಟಿಗಳು ರೈತರನ್ನು ಕಡೆಗಣಿಸಿ ಗಂಗಾಪೂರ ಸಕ್ಕರೆ ಕಾರ್ಖಾನೆಗೆ ರಸಗೊಬ್ಬರ ಪೂರೈಸುತ್ತಿದ್ದಾರೆ ಎನ್ನುವ ರೋಪಗಳು ಕೇಳಿ ಬರುತ್ತಿವೆ. ರೈತರಿಗೆ ಗೊಬ್ಬರ ಕೊಡದಂತಹ ಸೊಸೈಟಿಗಳ ಪರವಾನಗಿ ರದ್ದು ಪಡಿಸಬೇಕು ಎಂದು ಎಂದು ಶಾಸಕ ಡಾ.ಚಂದ್ರು ಲಮಾಣಿ ಅವರು ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ರೈತರು ಒಂದೇ ತರಹದ ಬೆಳೆ ಬೆಳೆಯದೇ ವರ್ಷದಿಂದ ವರ್ಷಕ್ಕೆ ಬೆಳೆಯಲ್ಲಿ ಬದಲಾವಣೆ ಮಾಡಬೇಕು. ಮಳೆರಾಯನ ಆಗಮನದಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಪ್ರಸ್ತುತ ವಾಡಿಕೆಗಿಂತ ಹೆಚ್ಚುವರಿ ಮಳೆಯಾಗಿದೆ ಎಂದರು.
ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಹೇಮಗಿರೀಶ ಹಾವಿನಾಳ ಮಾತನಾಡಿ, ರೈತರು ಕಾಲಕ್ಕೆ ತಕ್ಕಂತೆ ಬದಲಾವಣೆ ಕಾಣಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಬೆಳೆ ನಿರ್ವಹಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಎಚ್. ಮಾತನಾಡಿ, ಡಿಎಪಿಯಲ್ಲಿ ಸಾರಜನಕ, ರಂಜಕ ಮಾತ್ರ ಇರುತ್ತದೆ. ಸಂಯುಕ್ತ ಗೊಬ್ಬರದಲ್ಲಿ ಸಾರಜನಕ, ರಂಜಕ ಜೊತೆಗೆ ಪೊಟ್ಯಾಷಿಯಂ ಸಹ ಇರುತ್ತದೆ. ಪೊಟ್ಯಾಷಿಯಂ ಇರುವುದರಿಂದ ಬೆಳೆಗೆ ರೋಗ ಬರದಂತೆ ನೋಡಿಕೊಳ್ಳುತ್ತದೆ ಎಂದರು.
ಶಿವು ನವಲಗುಂದ, ಹನುಮರಡ್ಡಿ ಮಾದನೂರ, ಶಿವನಗೌಡ ಗೌಡರ, ಈಶ್ವರಪ್ಪ ಮಲ್ಲಶೆಟ್ಟರ, ಮೈಲಾರಪ್ಪ ಕಲಕೇರಿ, ಬಸವರಾಜ ಚಿಗಣ್ಣವರ, ಜ್ಯೋತಿ ಹಾನಗಲ್, ಅರುಣಾ ಪಾಟೀಲ, ವೀರೇಶ ಸೊಪ್ಪಿನ, ಗೌರಿಶಂಕರ ಸಜ್ಜನರ ಇತರರು ಇದ್ದರು. ಗುಡದಪ್ಪ ಲಿಂಗಶೆಟ್ಟರ ನಿರೂಪಿಸಿದರು.