ಜ್ಞಾನಭಾರತಿಯಲ್ಲಿ ಕಸ ಎಸೆದರೆ ಕಾನೂನು ಕ್ರಮ: ಬೆಂ.ವಿವಿ ಎಚ್ಚರಿಕೆ

jnanabharathi campus
Published on

ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕರು ಕಸ ಎಸೆದರೆ ಭಾರೀ ಪ್ರಮಾಣದ ದಂಡ ವಿಧಿಸುವ ಜತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಬೆಂಗಳೂರು ವಿಶ್ವವಿದ್ಯಾಲಯವು ಎಚ್ಚರಿಕೆ ನೀಡಿದೆ.

ಜ್ಞಾನಭಾರತಿ ಆವರಣವು 1,201 ಎಕರೆ ವಿಸ್ತೀರ್ಣದ ಪ್ರದೇಶವಾಗಿದ್ದು, ಜೀವ ವೈವಿಧ್ಯತೆಯಿಂದ ಕೂಡಿದೆ. ಬೃಹದಾಕಾರವಾಗಿ ಹೆಚ್ಚು ಜನಸಾಂದ್ರತೆಯಿಂದ ಕೂಡಿರುವ ಬೆಂಗಳೂರಿನ ಪ್ರಮುಖ ಭಾಗವಾಗಿರುವ ಹಸಿರು ಪ್ರದೇಶವಾಗಿದೆ.

ಹೆಚ್ಚಿನ ಜನರ ಓಡಾಟದಿಂದಾಗಿ ಜ್ಞಾನಭಾರತಿ ಪರಿಸರ ನಿರ್ವಹಣೆ ಕಾರ್ಯವು ಸವಾಲಾಗಿದೆ. ಇದನ್ನು ಕಾಪಾಡುವ ಜವಾಬ್ದಾರಿಯು ವಿಶ್ವವಿದ್ಯಾಲಯದ ಮೇಲಿದ್ದು, ವಿಶ್ವವಿದ್ಯಾಲಯದಿಂದ ನಿರಂತರ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿ ಆಡಳಿತ ವರ್ಗಕ್ಕೆ ಸಾರ್ವಜನಿಕರ ಸಹಕಾರವೇ ಅತಿ ಮುಖ್ಯವಾಗಿದೆ. ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಆದರೆ, ಕೆಲವು ಸಾರ್ವಜನಿಕರು, ವಾಹನ ಸವಾರರು ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ಬಹಳ ಕಳವಳಕಾರಿಯಾದ ವಿಷಯವಾಗಿದೆ. ಇದರಿಂದಾಗಿ ಆವರಣದ ಸ್ವಚ್ಛ ಪರಿಸರಕ್ಕೆ ಧಕ್ಕೆ ಯಾಗಿದೆ. ಹೀಗಾಗಿ, ಜ್ಞಾನಭಾರತಿ ಆವರಣದಲ್ಲಿ ಕಸ/ತ್ಯಾಜ್ಯ ಎಸೆಯುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ವಿವಿ ಕುಲಸಚಿವರು ಎಚ್ಚರಿಕೆ ನೀಡಿದ್ದಾರೆ.

80 ಗೃಹರಕ್ಷಕ ಸಿಬ್ಬಂದಿ ನೇಮಕ

80ಕ್ಕೂ ಹೆಚ್ಚಿನ ಗೃಹರಕ್ಷಕ ದಳ (ಹೋಮ್‌ಗಾರ್ಡ್) ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕೆಲವು ನಿಗದಿತ ಸ್ಥಳಗಳಲ್ಲಿ ಕಾವಲು ಕಾಯಲಿದ್ದು, ಕಸ ಹಾಕದಂತೆ ನೋಡಿಕೊಳ್ಳುತ್ತಾರೆ ಮತ್ತು ಬಿಬಿಎಂಪಿ ಮಾರ್ಷಲ್ಸ್‌ಗಳು ದಂಡ ವಿಧಿಸುತ್ತಾರೆ. ಹಾಗೆಯೇ, ವಿಶ್ವವಿದ್ಯಾಲಯದ ಆಡಳಿತಕ್ಕೂ ದಂಡ ವಿಧಿಸುವ ಅನುಮತಿ ನೀಡಿದೆ ಎಂದು ವಿವಿ ಆಡಳಿತ ಮಂಡಳಿಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net