ಸಿ.ಡಿ.ಪ್ರಕರಣ-ಕಾನೂನು ಕ್ರಮ ಅಗತ್ಯ: ರಾಜಶೇಖರ ಮಲಾಲಿ

Rajashekhar malaali
Published on

ಚಿಕ್ಕಮಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣ ಒಂದು ದುರಂತ. ಇದರ ಹಿಂದೆ ದೊಡ್ಡ ಷಡ್ಯಂತ್ರ, ಪಿತೂರಿ ಇದ್ದು ಹೀಗೆ ಮಾಡುವವರ ವಿರುದ್ಧ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮಲಾಲಿ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವರನ್ನು ಹಣಿಯಬೇಕು. ರಾಜೀನಾಮೆ ಕೊಡಿಸಬೇಕು ಎನ್ನುವ ಕಾರಣಕ್ಕೆ ಒಂದು ದೊಡ್ಡ ತಂಡ ಸೇರಿ ಈ ಕೃತ್ಯ ಎಸಗಿದೆ. ರಮೇಶ್ ಜಾರಕಿಹೊಳಿ ಮತ್ತು ಅವರ ಸಹೋದರ ಕೂಡ ಇದನ್ನೇ ಹೇಳಿದ್ದಾರೆ. ಇಂಥ ವಿಚಾರದಲ್ಲಿ ರಾಜಕಾರಣಿಗಳು ಎಚ್ಚರದಿಂದಿರಬೇಕು ಎಂದು ನೀಡಿದರು.

ಹಿಂದಿರುವ ಸತ್ಯ ಬಯಲಾಗಬೇಕು:

ಪ್ರಕರಣ ಸಂಬಂಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮೂರು ದಿನಗಳ ಹಿಂದೆ ಬಾಲಚಂದ್ರ ಜಾರಕಿ ಹೊಳಿ ಹೇಳಿದ್ದರು. ಅದನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಈ ಪ್ರಕರಣದ ಹಿಂದೆ ಯಾರ್ಯಾರು ಇದ್ದಾರೆ. ಇದು ಹನಿಟ್ರ್ಯಾಪ್ ಪ್ರಕರಣವೋ ಅಥವಾ ಇನ್ನೊಂದೊ ಎನ್ನುವುದು ಬಹಿರಂಗಗೊಳ್ಳಬೇಕಿದೆ ಎಂದರು. ಖಾಸಗಿ ವ್ಯಕ್ತಿತ್ವವನ್ನು ಈ ರೀತಿ ಹಾಳುಮಾಡುವುದನ್ನು ತಡೆಯಬೇಕು. ಖಂಡಿತವಾಗಿಯೂ ಹೀಗೆ ಮಾಡುವವರ ವಿರುದ್ಧ

ಕಾನೂನು ಕ್ರಮ ಜರುಗಿಸಲೇಬೇಕು ಎಂದರು. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಿ.ಡಿ.ಯನ್ನು ತಿದ್ದಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಈ ವಿಷಯದಲ್ಲಿ ನಾವು ಪರಿಣಿತರಲ್ಲ. ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಬಳಿಕ ವಾಸ್ತವ ತಿಳಿಯಲಿದೆ ಎಂದರು.

9 ನೇ ಪ್ರಕರಣ ಇದು:

ರಾಜಕಾರಣಿಗಳಿಗೆ ಸಂಬಂಧಿಸಿದ 9 ನೇ ಪ್ರಕರಣ ಇದು. ಆದರೆ ಯಾರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ. ಬೆಳಗಿನ ಕಾಫಿ, ತಿಂಡಿ ರೀತಿಯಲ್ಲಿ ರಾಜಕಾರಣಿಗಳಿಗೆ ಇದೊಂದು ಹವ್ಯಾಸದಂತಾಗಿದೆ. ಇಂಥ ಕೃತ್ಯದಲ್ಲಿ ಭಾಗಿಯಾಗುವಾಗ ತಮ್ಮ ಹೆಂಡತಿ ಮಕ್ಕಳು ಯಾವ ರೀತಿ ಸಮಾಜದಲ್ಲಿ ಮುಖ ಇಟ್ಟುಕೊಂಡು ಓಡಾಡಬೇಕು ಎನ್ನುವುದನ್ನು ಯೋಚಿಸಬೇಕಾಗುತ್ತದೆ. ಈಗಲೂ ಕೆಲವು ರಾಜಕಾರಣಿಗಳು ಗೋವಾಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಅಂಥ ಹವ್ಯಾಸಗಳಿಂದ ಹೊರಬರಬೇಕು ಎಂದರು.

ವೇಶ್ಯಾವಾಟಿಕೆ ನಿರ್ಮೂಲನೆ ಮಾಡಲಿ:

ತಾಂತ್ರಿಕವಾಗಿಯೂ ರಾಜಕಾರಣಿಗಳು ಮುಗ್ಧರಿರುತ್ತಾರೆ. ಮೊನ್ನೆಯ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕ್ಯಾಮೆರಾವನ್ನು ಎಲ್ಲಿ ಇಟ್ಟಿದ್ದರು ಎನ್ನುವ ಪ್ರಶ್ನೆ ಏಳುತ್ತದೆ ಎಂದರು. ರಾಜಕಾರಣಿಗಳ ಸಿ.ಡಿ. ತಯಾರಿಸಿ ಸುಳ್ಳು ಆರೋಪ ಹೊರಿಸುವುದನ್ನು ತಡೆಯಲು ರಾಜ್ಯ ಸರ್ಕಾರ ಕಾನೂನು ತರಲು ಹೊರಟಿರುವುದು ಸರಿಯಲ್ಲ. ಹೀಗೆ ಮಾಡಿದರೆ ನಾಳೆ ವಿಧಾನಸೌಧವನ್ನು ಕೂಡ ದುರ್ಬಳಕೆ ಮಾಡುತ್ತಾರೆ. ಸರ್ಕಾರ ಮೊದಲು ವೇಶ್ಯಾವಾಟಿಕೆ ನಿರ್ಮೂಲನೆ ಮಾಡಲಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net