ಹೆಚ್ಚಿನ ಬಡ್ಡಿ ವಸೂಲು ಮಾಡಿದರೆ ಕಾನೂನು ಕ್ರಮ

6 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಹಕಾರ ಇಲಾಖೆಯಿಂದ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಹಾಗೂ ನಿಯಮಾವಳಿಗಳು 1965 ಅನ್ವಯ ನೋಂದಾಯಿತ ಖಾಸಗಿ ಲೇವಾದೇವಿಗಾರರು ಹೆಚ್ಚಿನ ಬಡ್ಡಿ ವಸೂಲು ಮಾಡಿದರೆ, ಅವರ ಲೈಸನ್ಸ್​ ರದ್ದುಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲೆಯ ಖಾಸಗಿ ಲೇವಾದೇವಿದಾರರು, ಮೈಕ್ರೋ ಫೈನಾನ್ಸ್​ ಮತ್ತು ಫೈನಾನ್ಸ್​ ಸಂಸ್ಥೆಗಳ ಪ್ರಮುಖರು, ಸಹಕಾರಿ ಇಲಾಖೆ, ಲೀಡ್​ ಬ್ಯಾಂಕ್​ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಾಗ ಸರ್ಕಾರ ನಿಯಮ ಪಾಲಿಸಬೇಕು. ಸಾಲದ ಮೊತ್ತ, ಬಡ್ಡಿ, ನಿಯಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರು ಸಾಲದ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಈ ಕುರಿತು ಸಹಕಾರಿ ಇಲಾಖೆ ಮತ್ತು ಪೊಲೀಸ್​ ಇಲಾಖೆ ನಿಗಾವಹಿಸಬೇಕು ಎಂದರು.

ಜಿಲ್ಲೆಯಲ್ಲಿ 720 ಲೇವಾದೇವಿಗಾರರು, 104 ಗಿರವಿದಾರರು, 281 ಹಣಕಾಸು ಸಂಸ್ಥೆಗಳನ್ನೊಳಗೊಂಡ ಒಟ್ಟು 1,105 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಕೆಲ ಸಂಸ್ಥಗಳು ಸ್ಥಗಿತವಾಗಿದ್ದು, ಅವುಗಳ ರದ್ದತಿಗೆ ಕ್ರಮಕೈಗೊಳ್ಳಬೇಕು ಎಂದರು.

ಪೊಲೀಸ್​ ಆಯುಕ್ತ ಎನ್​.ಶಶಿಕುಮಾರ ಮಾತನಾಡಿ, 1 ವರ್ಷದಲ್ಲಿ ಅವಳಿನಗರದಲ್ಲಿ ಸಾಲಗಾರರ ತೊಂದರೆ ಅನುಭವಿಸುತ್ತಿರುವ ಕುರಿತು ಸುಮಾರು 31 ಪ್ರಕರಣಗಳು ದಾಖಲಾಗಿದ್ದು, 50 ಜನರನ್ನು ಬಂಧಿಸಲಾಗಿದೆ. ಲೈಸನ್ಸದಾರರು ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡುವ ಮತ್ತು ಲೈಸನ್ಸ್​ ಪಡೆಯದೆ ಸಾಲದ ವ್ಯವಹಾರ ನಡೆಸುವರ ಬಗ್ಗೆ ನಿಗಾವಹಿಸಿ ಕಾನೂನಿಗೆ ಒಪ್ಪಿಸಬೇಕು. ಈ ಕೆಲಸವನ್ನು ಸಹಕಾರ ಇಲಾಖೆಯವರು ಪೊಲೀಸ್​ ಇಲಾಖೆ ಸಹಯೋಗದೊಂದಿಗೆ ಮಾಡಬೇಕು ಎಂದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ್​ ಮಾತನಾಡಿದರು. ಸಹಕಾರ ಇಲಾಖೆ ಸಹಾಯಕ ನಿಬಂಧಕ ನಿಂಗರಾಜ ಬೆಣ್ಣಿ ಮಾತನಾಡಿದರು.

ಲೀಡ್​ ಬ್ಯಾಂಕ್​ ಮ್ಯಾನೇಜರ್​ ಪ್ರಭುದೇವ ಎನ್​.ಜಿ., ಖಾಸಗಿ ಲೇವಾದೇವಿದಾರರು, ಮೈಕ್ರೋ ಫೈನಾನ್ಸ್​ ಕಂಪನಿಗಳ ಪ್ರತಿನಿಧಿಗಳು, ಫೈನಾನ್ಸ್​ ಸಂಸ್ಥೆಗಳ ಪ್ರತಿನಿಧಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net