

ಬೆಂಗಳೂರು: ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸುವುದು ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯಾಗಲಿದ್ದು, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಪ್ರಸ್ತುತ 24 ರಿಂದ 30 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು 40 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು. ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಸಾರ್ವಜನಿಕರು ಪರೀಕ್ಷೆಗೆ ಒಳಪಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ ಎಂದು ಕಾನೂನು ಕ್ರಮ ಜರುಗಿಸಲಾಗುವುದು. ಮುಂದಿನ ದಿನಗಳಲ್ಲಿ ಕಡ್ಡಾಯ ಕೋವಿಡ್ ಪರೀಕ್ಷೆಗೊಳಪಡುವಂತೆ ಆದೇಶ ಹೊರಡಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ಹೇಳಿದರು.
ಕಾರ್ಖಾನೆ, ಗಾರ್ವೆಂಟ್ಸ್ಗಳಲ್ಲಿ ಪರೀಕ್ಷೆ: ಪ್ರಸ್ತುತ ಕೋವಿಡ್ ಸೋಂಕಿತರು ಪತ್ತೆಯಾದ ಪ್ರದೇಶ, ಅವರ ಸಂಪರ್ಕಕ್ಕೆ ಬಂದವರು, ಉಸಿರಾಟ ಸಮಸ್ಯೆ, ಶೀತಜ್ವರ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ, ಮುಂದಿನ ದಿನಗಳಲ್ಲಿ ದೊಡ್ಡ ಕಾರ್ಖಾನೆ, ಗಾರ್ವೆಂಟ್ಗಳು, ಹೋಟೆಲ್ಗಳು ಹಾಗೂ ಹೆಚ್ಚು ಕಾರ್ವಿುಕರಿರುವ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುವುದು. ಇದಕ್ಕಾಗಿ ಸ್ವಾಬ್ ಟೆಸ್ಟ್ ಮಾಡಲು 148 ಮಂದಿ ನೇಮಕ ಮಾಡಿಕೊಂಡು, ಮೊಬೈಲ್ ಪರೀಕ್ಷಾ ತಂಡಗಳನ್ನು ರಚಿಸಲಾಗುವುದು. ಬಿಬಿಎಂಪಿ ಟೆಂಡರ್ ಮೂಲಕ 5 ಲಕ್ಷ ಟೆಸ್ಟಿಂಗ್ ಕಿಟ್ ತರಿಸಲು ಸಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮನೆಯಲ್ಲಿನ ಸೋಂಕಿತರಿಗೆ ಕಿಟ್: ಪಾಲಿಕೆ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕಿತರ ಪೈಕಿ ಶೇ.52 ಮಂದಿ ಹೋಂ ಐಸೋಲೇಷನ್ನಲ್ಲಿದ್ದು, ಪ್ರತಿ 24 ಗಂಟೆಗೊಮ್ಮೆ ಆರೋಗ್ಯ ಪರಿಶೀಲನೆ ಮಾಡಲಾಗುತ್ತಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವ ಎಲ್ಲ ಸೋಂಕಿತರಿಗೆ ಒಂದೇ ರೀತಿಯ ಕೋವಿಡ್ ಕಿಟ್ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. ಐಸೋಲೇಷನ್ ಕಿಟ್ಗಳಲ್ಲಿ ಔಷಧಗಳ ಜತೆಗೆ ಎಷ್ಟು ಪ್ರಮಾಣದಲ್ಲಿ ಯಾವಾವ ಅವಧಿಗೆ ಬಳಸಬೇಕು ಎಂಬ ಬಗ್ಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡುವಂತೆ ಕೋರಲಾಗಿದೆ ಎಂದು ಆಯುಕ್ತರು ತಿಳಿಸಿದರು.
ದಂಡ ಹೆಚ್ಚಳಕ್ಕೆ ಪ್ರಸ್ತಾಪ
ನಗರದಲ್ಲಿ ಕರೊನಾ ಸೋಂಕಿನ ಪ್ರಮಾಣ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದರೂ, ಮಾಸ್ಕ್ ಧರಿಸದೆ ಸಂಚಾರ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮಾಸ್ಕ್ ಧರಿಸದ ವರಿಗೆ ಕೇವಲ 200 ರೂ. ಇರುವ ದಂಡ ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಜುನಾಥಪ್ರಸಾದ್ ತಿಳಿಸಿದರು.