

ಸೋಮವಾರಪೇಟೆ : ತಾಲೂಕು ಕಚೇರಿಯಲ್ಲಿ ಕರ್ತವ್ಯ ಲೋಪ ಹಾಗೂ ನಿಯಮಮೀರಿ ಕೆಲಸ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಡಗು ಲೋಕಾಯುಕ್ತ ಡಿವೈಎಸ್‌ಪಿ ಕೆ.ಸಿ. ಪ್ರಕಾಶ್ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಕಚೇರಿಗೆ ಬರುವ ಸಾರ್ವಜನಿಕ ಸಮಸ್ಯೆಯನ್ನು ಆಲಿಸಿ ವಿಳಂಬ ಮಾಡದೆ ಕೆಲಸ ಮಾಡಬೇಕು. ನಿಯಮಮೀರಿ ಕೆಲಸ ಮಾಡಿದಲ್ಲಿ ಹಿರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಕ್ರಮ ರುಜುವಾತಾದಲ್ಲಿ ನೌಕರರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಚೇರಿಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಗೃಹದ ಸೌಲಭ್ಯ ಒದಗಿಸಬೇಕು. ಬೆಳಗ್ಗೆ 10ರಿಂದ ಸಂಜೆ 5-30ರ ವರೆಗೆ ಕಚೇರಿಯಲ್ಲಿಯೇ ಕುಳಿತು ಕೆಲಸ ಮಾಡಬೇಕು. ಮಧ್ಯದಲ್ಲಿ ಹೊರಗೆ ಹೋಗುವುದು, ಇಲ್ಲ ಸಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸರ್ಕಾರಿ ನೌಕರರು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡಬೇಕು. ಪ್ರತಿಯೊಬ್ಬರು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಗೋಮಾಳ, ಸಿ ಆ್ಯಂಡ್ ಡಿ ಕೃಷಿ ಭೂಮಿಯ ಕಡತಗಳಿಗೆ ಸಂಬಂಧಿಸಿದಂತೆ, ಸರ್ಕಾರದ ನಿಯಮಗಳನ್ನು ಪಾಲಿಸಬೇಕಿದೆ ಎಂದು ಸೂಚಿಸಿದರು. ಚೌಡ್ಲು ಗ್ರಾಮದ ರೋಹಿಣಿ ತಮ್ಮ ಮನೆಗೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದು, ಕೂಡಲೇ ಕೊಡಿಸಬೇಕೆಂದು ಮನವಿ ಮಾಡಿದರು.
ಶನಿವಾರಸಂತೆಯ ಆರ್.ಪಿ. ಮೋಹನ, ನನ್ನ ಸ್ವಾಧೀನದಲ್ಲಿರುವ ಜಾಗಕ್ಕೆ 11 ಇ ನಕ್ಷೆ ಮಾಡಿಕೊಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆರ್‌ಟಿಸಿ ಮತ್ತು ಎಂಸಿ ದಾಖಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಕೇಳಿಕೊಂಡರು.
ಅರಿಶಿನಗುಪ್ಪೆ ಗ್ರಾಮದ ಬೆಳ್ಯಪ್ಪ, ತನಗೆ ಸೇರಿದ 12/1ರ ಸರ್ವೆ ನಂಬರ್‌ನಲ್ಲಿ 2.65 ಎಕರೆ ಕೃಷಿ ಜಮೀನಿದೆ. ಇದರ ಪಿ.ಟಿ. ಶೀಟ್ ಹುಡುಕಿಕೊಡುವಂತೆ ಕೋರಿದ್ದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಎಂದು ದೂರಿದರು.
ದೊಡ್ಡ ಬಂಡಾರ ಗ್ರಾಮದ ಡಿ.ಎಂ. ಮಂಜುನಾಥ ತನ್ನ ತಂದೆಯ ಜನನ ಮತ್ತು ಮರಣ ದೃಢೀಕರಣ ಪತ್ರದಲ್ಲಿ ತಂದೆಯ ಹೆಸರು ಬದಲಾಗಿದ್ದು, ಸರಿಪಡಿಸಿಕೊಡುವಂತೆ ಹಲವು ತಿಂಗಳುಗಳಿಂದ ಕಚೇರಿಗೆ ಅಲೆಯುತ್ತಿದ್ದರೂ, ಸರಿಪಡಿಸಿಕೊಡುತ್ತಿಲ್ಲ ಎಂದು ದೂರಿದರು. ಸಂಬಂಧಪಟ್ಟ ಸಿಬ್ಬಂದಿ ಕರೆಸಿದ ತಹಸೀಲ್ದಾರ್ ಕೃಷ್ಣಮೂರ್ತಿ ಎಲ್ಲ ದೂರಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿ ಕೊಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.