

ಕೊಳ್ಳೇಗಾಲ: ನನ್ನ ಜತೆ ಗುರುತಿಸಿಕೊಂಡಿದ್ದ ನಗರಸಭೆಯ ಆರು ಬಿಜೆಪಿ ಸದಸ್ಯರು ನನಗೆ ದ್ರೋಹ ಮಾಡಿ ಹೊರಹೊಗಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಮಾಡಲು ಪಕ್ಷದ ವರಿಷ್ಠರ ಜತೆ ಚರ್ಚಿಸುವುದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಮಹೇಶ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಕಾರ್ಯ ತಂತ್ರಗಳನ್ನು ರೂಪಿಸಿಕೊಂಡು ಪ್ಲಾನ್ ಮಾಡಿಕೊಂಡಿದ್ದೆವು. ಚುನಾವಣೆಯಲ್ಲಿ ಗೆಲ್ಲಲು ಸಂಖ್ಯಾಬಲ ಇರದ ಹಿನ್ನೆಲೆಯಲ್ಲಿ 13 ಬಿಜೆಪಿ ಸದಸ್ಯರಿಗೂ ವಿಪ್ ಜಾರಿ ಮಾಡಿ ಅವರನ್ನು ಉಳಿಸಿಕೊಳ್ಳಬೇಕೆಂದು ಅಂದುಕೊಂಡಿದ್ದೆವು. ಕೊನೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ಸದಸ್ಯರ ಮಾತಿನಂತೆ ಸದಸ್ಯ ಚಿಂತು ಪರಮೇಶ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಗುರುತಿಸಲಾಗಿತ್ತು. ಇವರಿಗೆ ಮತ ನೀಡುವಂತೆ ಬಿಜೆಪಿಯ 13 ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿತ್ತು. ದುರದೃಷ್ಟವಶಾತ್ ನಾಮಪತ್ರ ಸಲ್ಲಿಸಲು ಬೇಕಾದ ಸದಸ್ಯರ ಸಂಖ್ಯಾ ಬಲ ಇಲ್ಲದ್ದನ್ನು ಕಂಡು ಹೊರ ಗುಳಿಯಬೇಕಾಯಿತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.
ನನ್ನ ಪತ್ನಿ ನಿಧನರಾಗಿ ಇಂದಿಗೆ 3 ವರ್ಷವಾಗಿದ್ದು. 3ನೇ ವರ್ಷದ ಪುಣ್ಯಸ್ಮರಣೆ ಮಾಡಬೇಕಿದೆ. 2022ರಲ್ಲಿ ಇದೇ ದಿನ ನನ್ನ ಜತಗೆ ಗುರುತಿಸಿಕೊಂಡಿದ್ದ ಬಿಎಸ್ಪಿಯ 7 ಸದಸ್ಯರು ಅನರ್ಹಗೊಂಡಿದ್ದರು. ಜಿಲ್ಲಾಧಿಕಾರಿ ನ್ಯಾಯಾಲಯ ಅನರ್ಹ ಸದಸ್ಯರೆಂದು ಆದೇಶ ಹೊರಡಿಸಿತ್ತು. ನನ್ನ ಪತ್ನಿ ನಿಧನರಾದ ದಿನವೇ ಈ ಸುದ್ದಿ ಕೇಳಿ ನನಗೆ ಬಹಳ ನೋವಾಗಿತ್ತು. ಅದರೂ, ಮಾಹಿತಿ ತಿಳಿದ ಕೂಡಲೆ ಮಾರನೆಯ ಬೆಂಗಳೂರಿನಲ್ಲಿ ವಕೀಲರನ್ನು ಭೇಟಿ ಮಾಡಿ 7 ಜನರ ಸದಸ್ಯರ ಸದಸ್ಯತ್ವವನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಾನೂನು ಹೋರಾಟ ಮಾಡಿದೆ. ಆದರೆ, ಡಿಸಿ ಅವರ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿಯಿತು. ಸುಪ್ರೀಂ ಕೋರ್ಟ್‌ನಲ್ಲೂ ಹೋರಾಟ ಮಾಡುವ ನಿರ್ಧಾರ ಮಾಡಿದ್ದೆ. ಆದರೆ ಬದಲಾದ ಸನ್ನಿವೇಶದಲ್ಲಿ ಹೈಕೋರ್ಟ್ ಈ 7 ಜನರು ಮತ್ತೆ ಚುನಾವಣೆಗೆ ನಿಲ್ಲುವ ಅವಕಾಶ ನೀಡಿತು.
ನನ್ನ ನಂಬಿ ಬಂದವರಿಗೆ ಈ ಅವಕಾಶ ಸಿಕ್ಕಿದ್ದು ನನಗೆ ಜೀವ ಬಂದಂತಾಯಿತು. ಚುನಾವಣೆ ಪ್ರಕ್ರಿಯೆ ಆರಂಭದ ಕೂಡಲೇ ಈ 7 ಜನ ಸದಸ್ಯರಿಗೆ ಟಿಕೆಟ್ ಕೊಡಬಾರದು ಎಂಬ ಮಾತು ಕೇಳಿಬಂದವು. ಆದರೂ ಅಂದು ಸಚಿವ ಸೋಮಣ್ಣ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಪಕ್ಷಾಂತರ ನಿಷೇಧ ಕಾಯ್ದೆಯಡಿ 7 ಜನರು ಅಧಿಕಾರ ಕಳೆದುಕೊಂಡಿದ್ದಾರೆ. ಅವರು ಗೆಲ್ಲಲಿ, ಸೋಲಲಿ, 7 ಜನರಿಗೆ ಟಿಕೆಟ್ ಕೊಡೋಣ ಎಂದು ತೀರ್ಮಾನಿಸಿದ್ದರು. ಅಂತೆಯೇ, ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7 ಜನರ ಪೈಕಿ 6 ಜನರು ಗೆದ್ದರು. ನಂತರ, ಮುಂದಿನ ವಿಧಾನ ಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ 7 ಜನ ಸದಸ್ಯರು ನನ್ನೊಂದಿಗೆ ಕೆಲಸ ಮಾಡಿದ್ದಾರೆ. ಆದರೀಗ, ನನಗೆ ಮೋಸ ಮಾಡಿದರು ಎಂದು ಅಸಮಾಧಾನ ಹೊರ ಹಾಕಿದರು.
ಮಾಜಿ ಶಾಸಕ ಎಸ್.ಬಾಲರಾಜ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪರಮೇಶ್ವರಯ್ಯ, ಮುಖಂಡ ಶಿವಕುಮಾರ್ ಬೂದಿತಿಟ್ಟು, ಎಸ್.ಸಿದ್ದಪ್ಪಾಜಿ, ಕೆ.ಕೆ.ಮೂರ್ತಿ, ನಗರಸಭೆ ಸದಸ್ಯ ಚಿಂತು ಪರಮೇಶ್ ಇದ್ದರು.