ಸಂವಿಧಾನ ಉಳಿಸಲು ಎಡಗೈ-ಬಲಗೈ ಒಗ್ಗಟ್ಟು ಅಗತ್ಯ

mysore
Published on

ಮೈಸೂರು: ಪರಿಶಿಷ್ಟ ಜಾತಿಯಲ್ಲಿನ ಎಡಗೈ ಮತ್ತು ಬಲಗೈ ಒಳಪಂಗಡಗಳ ನಡುವೆ ಕಂದಕ ಸೃಷ್ಟಿಸಿ ಪರಸ್ಪರ ದೂರ ಮಾಡಲಾಗುತ್ತಿದೆ. ಇದು ಸರಿಯಲ್ಲ. ಕೋಮುವಾದಿ ಶಕ್ತಿಯನ್ನು ಕಿತ್ತುಹಾಕಲು ಒಂದಾಗಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ, ಇಬ್ಬರಿಗೂ ಉಳಿಗಾಲ ಇಲ್ಲ ಎಂದು ಮಾಜಿ ಮೇಯರ್ ನಾರಾಯಣ್ ಎಚ್ಚರಿಸಿದರು.


ಚಾರ್ವಾಕ ಸಂಸ್ಥೆ ವತಿಯಿಂದ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಸಂವಿಧಾನ ಉಳಿಸಲು, ಕೋಮುವಾದ ಅಳಿಯಲು ಎಡಗೈ-ಬಲಗೈ ಜಾತಿಗಳು ಒಂದುಗೂಡುವ ಅನಿವಾರ್ಯತೆ’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.


ಸಂವಿಧಾನಕ್ಕೆ ಆಪತ್ತು ಬಂದಿದೆ. ಇದನ್ನು ಬುಡಮೇಲು ಮಾಡಲು ಸಂಚು ನಡೆದಿದೆ. ಹೀಗಾದರೆ, ಮೀಸಲಾತಿ, ಸರ್ಕಾರಿ ಸೌಲಭ್ಯಗಳು ಸಿಗಲ್ಲ. ಮತ್ತೆ ಗುಲಾಮಗಿರಿ ಪರಿಸ್ಥಿತಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ಕಿತ್ತಾಟ, ವೈಮನಸ್ಸು ಮರೆತು ಎರಡು ಒಳಪಂಗಡಗಳು ಒಗ್ಗಟ್ಟಾಗಿ ಸಂವಿಧಾನ ಉಳಿಸಿಕೊಳ್ಳಬೇಕು. ಅದಕ್ಕಾಗಿ ಕೋಮುವಾದಿ ಶಕ್ತಿಯನ್ನು ಮನೆಗೆ ಕಳುಹಿಸಬೇಕು ಎಂದರು.


ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯೂಎಸ್) ಮೀಸಲಾತಿ ಕಲ್ಪಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ. ಶೇ.3ರಷ್ಟು ಇರುವ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಅರ್ಜಿ ಹಾಕದೆ, ಪ್ರತಿಭಟನೆ, ಹೋರಾಟ ಮಾಡದೆ ಇವರಿಗೆ ಮೀಸಲಾತಿ ಕೊಟ್ಟಿರುವ ಹಿಂದಿನ ಮರ್ಮವನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದರು.


‘ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು’ ಎಂದು ಸಂಸದ ಅನಂತಕುಮಾರ್ ಹೆಗಡೆ ಬಹಿರಂಗವಾಗಿ ಹೇಳಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಯಾವುದೇ ಚಕಾರವೆತ್ತಲಿಲ್ಲ. ಇದುವೇ ಆರ್‌ಎಸ್‌ಎಸ್, ಬಿಜೆಪಿ ರಹಸ್ಯ ಕಾರ್ಯಸೂಚಿ. ಸಂವಿಧಾನವನ್ನು ತೆಗೆದು, ಮನುಧರ್ಮಶಾಸ್ತ್ರ ತರುವುದು ಇವರ ಹುನ್ನಾರವಾಗಿದೆ ಎಂದು ದೂರಿದರು.


ಅಸ್ಪಶ್ಯರಿಗೆ ಯಾವುದೇ ದೇವರು ಏನು ಮಾಡಲಿಲ್ಲ. ಅಂಬೇಡ್ಕರ್ ಮಾತ್ರ ಸಂವಿಧಾನದ ಮೂಲಕ ಸಕಲ ದೇಶ ವಾಸಿಗಳಿಗೂ ಅನುಕೂಲ ಕಲ್ಪಿಸಿಕೊಟ್ಟರು. ಹೀಗಾಗಿ, ಪ್ರತಿಯೊಬ್ಬರು ಇದನ್ನು ಸ್ಮರಿಸಿಕೊಳ್ಳಬೇಕು ಎಂದರು.


ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ಸಂವಿಧಾನಕ್ಕೆ ಧಕ್ಕೆಯಾದಾಗ ಎಡಗೈ-ಬಲಗೈ ಸಮುದಾಯದವರು ಮಾತ್ರ ಹೋರಾಟ ಮಾಡಬೇಕೇ? ಸಂವಿಧಾನ ದಲಿತರಿಗೆ ಮಾತ್ರವೇ? ದೇಶದಲ್ಲಿರುವ ಸಕಲ ಜೀವಿಗಳ ಬದುಕು ನಿರ್ಧರಿಸುವುದೇ ಸಂವಿಧಾನ. ಎಲ್ಲ ಜಾತಿ, ಧರ್ಮದವರಿಗೆ ಮಾನವೀಯ ಹಕ್ಕು ಕೊಟ್ಟಿರುವುದು ಸಂವಿಧಾನ. ಆದ್ದರಿಂದ ಇದಕ್ಕೆ ಆಪತ್ತು ಒಂದಾಗ ಎಲ್ಲರೂ ಧ್ವನಿಯೆತ್ತಿ ಹೋರಾಟ ನಡೆಸಬೇಕು ಎಂದರು.


ದಲಿತ ಮುಖಂಡರಾದ ಅಹಿಂದ ಜವರಪ್ಪ, ಆರ್.ಎಸ್.ದೊಡ್ಡಣ್ಣ, ಶಿವಪ್ರಸಾದ್ ಎಂ.ಸಿ.ಹುಂಡಿ, ಆಯೋಜಕ ಗಿರೀಶ್ ಮಾಚಳ್ಳಿ, ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net