ಇಸ್ರೇಲ್ ದಾಳಿ ಖಂಡೀಸಿ ಎಡ ಪಕ್ಷಗಳಿಂದ ಪ್ರತಿಭಟನೆ

raichur
raichur
Published on

ರಾಯಚೂರು ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ವಾಕಾಂಡವನ್ನು ಖಂಡಿಸಿ, ಪ್ಯಾಲೆಸ್ತೀನಿಗೆ ಬೆಂಬಲ ವ್ಯಕ್ತಪಡಿಸಿ ಎಡಪಕ್ಷಗಳ ಪದಾಧಿಕಾರಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಜೂ.17ರ ರಾಷ್ಟ್ರೀಯ ಸೌಹಾರ್ದತಾ ದಿನ ಆಚರಣೆ ಅಂಗವಾಗಿ ಪ್ರತಿಭಟನೆ ನಡೆಸುವ ತಕ್ಷಣವೇ ದಾಳಿ ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. ಕಳೆದ ಎರಡು ವರ್ಷಗಳಿಂದ ಇಸ್ರೇಲ್ ನಡೆಸುತ್ತಿರುವ ಅನಾಗರಿಕ ಬಾಂಬುಗಳ ದಾಳಿ, ಮಿಲಿಟರಿ ಆಕ್ರಮಣದಿಂದ 55 ಸಾವಿರಕ್ಕೂ ಹೆಚ್ಚಿನ ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ. ಲಕ್ಷಾಂತರ ಜನರು ಗಾಯಾಳುಗಳಾಗಿದ್ದಾರೆ. ಅಗತ್ಯ ಮೂಲ ಸಂರಚನೆ, ಆಸ್ಪತ್ರೆಗಳು, ಶಾಲೆಗಳು ನಿರಾಶ್ರಿತ ವಸತಿ ಕೇಂದ್ರಗಳನ್ನು ಗುರಿಯಿಟ್ಟು ದಾಳಿ ಮಾಡಲಾಗುತ್ತಿದೆ.

ಇದರಿಂದಾಗಿ ಪ್ಯಾಲೆಸ್ತೀನಿಯರು ಹಿಂದೆಂದೂ ಕಂಡರಿಯದ ನವ ದುರಂತವನ್ನು ಅನುಭವಿಸುವಂತಾಗಿದೆ. ಇದು ಜನಾಂಗ ಹತ್ಯೆಯಲ್ಲದೆ ಬೇರೇನೂ ಅಲ್ಲ. ಇಂತಹ ಸಂದರ್ಭದಲ್ಲಿ ಗಾಜಾ ಪ್ರದೇಶಕ್ಕೆ ಆಹಾರ ಪದಾರ್ಥಗಳನ್ನೂ ಇಸ್ರೇಲ್ ಬಿಡುತ್ತಿಲ್ಲ ಎಂಬುದು ಆತಂಕಕಾರಿಯಾಗಿದೆ. ಗಾಜಾ ಮೇಲಿನ ಆಕ್ರಮಣ ಮತು ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು. ಅದು ನಡೆಸಿರುವ ಜನಾಂಗೀಯ ದ್ವೇಷ ಮತ್ತು ಯುದ್ಧ ಅಪರಾಧಗಳನ್ನು ಖಂಡಿಸಿ, ಇಸ್ರೇಲನ್ನು ಜನಾಂಗೀಯ ದ್ವೇಷದ ಪ್ರಭುತ್ವವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು.ತಮ್ಮ ರಾಷ್ಟ್ರ, ಗೌರದ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ಯಾಲೆಸ್ಟೀನಿ ಜನತೆ ನಡೆಸುತ್ತಿರುವ ನ್ಯಾಯಯುತ ಹೋರಾಟವನ್ನು ಬೆಂಬಲಿಸಬೇಕು.

ಭಾರತ ದೇಶದ ಜನರ ಸಾಮ್ರಾಜ್ಯಶಾಹಿ-ವಿರೋಧಿ ಆಶೋತ್ತರಗಳಿಗೆ ಅನುಗುಣವಾಗಿ ಪ್ಯಾಲೆಸ್ತೀನಿಯರ ಆಶಯಗಳನ್ನು ಬೆಂಬಲಿಸುತ್ತ ಬಂದಿರುವ ನೆಲೆಯಲ್ಲೇ ಭಾರತ ಸರ್ಕಾರವು ನೀತಿಬದ್ಧ ನಿಲುವನ್ನು ತೆಗೆದುಕೊಳ್ಳಬೇಕು ಹಾಗೂ ಇಸ್ರೇಲಿನೊಂದಿಗೆ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಯು.ಬಸವರಾಜ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವರಲಕ್ಷ್ಮೀ, ಕೆ.ಜಿ.ವಿರೇಶ, ಎನ್.ಎಸ್.ವಿರೇಶ, ಅಪ್ಪಣ ಶರಣಪ್ಪ ಉದುಬಾಳ, ಡಿ.ಎಸ್.ಶರಣಬಸವ, ಮಹೇಶ, ಶಬ್ಬೀರ ಜಾಲಹಳ್ಳಿ, ಜಿಲಾನಿ ಪಾಷ, ಚಂದ್ರಶೇಖರ ಸೇರಿದಂತೆ ಅನೇಕರು ಇದ್ದರು.\

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net