

ಮೈಸೂರು: ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿಯನ್ನು ಏ.6 ಮತ್ತು 7ರಂದು ಬೃಹತ್ ಎಲ್‌ಇಡಿ ಪರದೆಯಲ್ಲಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.
ಏ.6ರಂದು ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯ ವೀಕ್ಷಣೆಗಾಗಿ ಪ್ರವೇಶ ದ್ವಾರವನ್ನು ಸಂಜೆ 5.30ಕ್ಕೆ ತೆರೆಯಲಾಗುವುದು.
ಏ.7ರಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಾಗೂ ಲಕ್ನೊ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಪಂದ್ಯಗಳು ಜರುಗಲಿದ್ದು, ಇದಕ್ಕಾಗಿ ದ್ವಾರವನ್ನು ಮಧ್ಯಾಹ್ನ 1.30ಕ್ಕೆ ತೆರೆಯಲಾಗುವುದು ಎಂದು ರಾಜ್ಯ ಕ್ರಿಕೆಟ್ ಮಂಡಳಿ ಮೈಸೂರು ವಲಯ ಸಂಚಾಲಕ ಹರಿಕೃಷ್ಣಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಗಳ ವೀಕ್ಷಣೆಗೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಈ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ ವ್ಯವಸ್ಥೆಯಲ್ಲಿ ಅಂಗವಿಕಲರು, ಹಿರಿಯ ನಾಗರಿಕರಿಗೆ ಸೂಕ್ತ ಸೌಲಭ್ಯಗಳಿವೆ. ಮಕ್ಕಳು, ದೊಡ್ಡವರಿಗೆ ಮನರಂಜನಾ ಆಟ, ತಿಂಡಿ ತಿನಿಸುಗಳ ಮಳಿಗೆ ಇರಲಿವೆ ಎಂದು ತಿಳಿಸಿದರು.
ಬಿಸಿಸಿಐ ಈ ರೀತಿ ದೇಶದ ವಿವಿಧೆಡೆ ಆಗಾಗ್ಗೆ ಫ್ಯಾನ್ ಪಾರ್ಕ್ ಆಯೋಜಿಸುತ್ತಿದ್ದು, ಕ್ರಿಕೆಟ್ ಪ್ರಿಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಬಿಸಿಸಿಐ ಪ್ರತಿನಿಧಿ ಸತ್ಯಪಾಲ್ ಇದ್ದರು.