

ಕಳಸ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೀಘ್ರದಲ್ಲೇ 50 ಲಕ್ಷ ರೂ.ವೆಚ್ಚದಲ್ಲಿ ಎರಡು ಉಪನ್ಯಾಸರ ಕೊಠಡಿ ನಿರ್ಮಾಣ ಮಾಡಲು ಚಾಲನೆ ನೀಡಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಾಣಗೊಂಡ ನೂತನ ತರಗತಿ ಕೊಠಡಿ ಉದ್ಘಾಟನೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜಿನ ಅಭಿವೃದ್ಧಿ ದೃಷ್ಟಿಯಿಂದ 15 ಲಕ್ಷ ರೂ.ವೆಚ್ಚದಲ್ಲಿ ನೂತನ ತರಗತಿ ಕೊಠಡಿ ನಿರ್ಮಿಸಲಾಗಿದೆ. ಕಳೆದ ವರ್ಷ ಕಾಲೇಜಿನ ಆವರಣಕ್ಕೆ ಕಾಂಪೌಂಡ್ ನಿರ್ಮಿಸಲಾಗಿತ್ತು. ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಐಎಎಸ್/ಕೆಎಎಸ್ ಹುದ್ದೆಗಳಿಗೆ ಆಯ್ಕೆಯಾದವರು ಬಹಳ ಕಡಿಮೆ ಸಂಖ್ಯೆಯಲ್ಲಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಕ್ಷೇತ್ರದ ಯುವಜನತೆ ನಾಗರಿಕ ಸೇವಾ ಪರೀಕ್ಷೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಇದಕ್ಕೆ ಬೇಕಾದ ನೆರವು ನೀಡಲಾಗುವುದು. ಕಾಲೇಜಿನ ಸಿಡಿಸಿ ಕಾರ್ಯಾಧ್ಯಕ್ಷ ಹಿತ್ತಲಮಕ್ಕಿ ರಾಜೇಂದ್ರ ಹೆಬ್ಬಾರ್ ಸುಮಾರು 58 ವಿದ್ಯಾರ್ಥಿಗಳ 2 ಲಕ್ಷ ದಷ್ಟು ಶುಲ್ಕ ಪಾವತಿ ಮಾಡಲು ಆರ್ಥಿಕ ಸಹಾಯ ನೀಡಿದ್ದಾರೆ. ಕಷ್ಟ್ಟದಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒದಗಿಸಿದ ಈ ನೆರವನ್ನು ಅತ್ಯಂತ ಶ್ರೇಷ್ಠ ಎಂದು ನಾನು ಪರಿಗಣಿಸುತ್ತೇನೆ ಎಂದರು.
ನಂತರ ಕಾಲೇಜಿನ ಕುಂದು,ಕೊರತೆ, ಶೌಚಗೃಹ, ಸರ್ಕಾರಿ ವಸತಿ ನಿಲಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.
ಜಿಪಂ ಮಾಜಿ ಸದಸ್ಯ ಕೆ.ಆರ್.ಪ್ರಭಾಕರ್, ವಿನಯ ಕುಮಾರ್ ಶೆಟ್ಟಿ, ಗಣೇಶ್ ಭಟ್, ಶ್ರೇಣಿಕ್, ಮಹಮ್ಮದ್ ರಫೀಕ್, ವಿಶ್ವನಾಥ್ ಮರಸಣಿಗೆ, ರಾಮದೇವ್, ಅಬ್ದುಲ್ ಶುಕೂರ್, ಕೆ.ಸಿ.ಮಹೇಶ್ ಎಡದಾಳು, ಬಾಲಕೃಷ್ಣ, ಶಾಹುಲ್ ಇದ್ದರು.