ಮಂಡ್ಯದಲ್ಲಿ ಪೊಲೀಸರ ವಿರುದ್ಧ ಉಪನ್ಯಾಸಕನ ಏಕಾಂಗಿ ಪ್ರತಿಭಟನೆ: ತರಗತಿ ತೆಗೆದುಕೊಳ್ಳಲು ಬಿಡದಕ್ಕೆ ಆಕ್ರೋಶ

Lecturer protest against police mandya
Published on

ಮಂಡ್ಯ: ತರಗತಿ ತೆಗೆದುಕೊಳ್ಳಲು ಹೋದ ವೇಳೆ ಪೊಲೀಸ್ ಅಧಿಕಾರಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ. ಆದ್ದರಿಂದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಗರದಲ್ಲಿ ಸೋಮವಾರ ರಾಜ್ಯ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಿ.ಎಸ್.ನಾಗರಾಜು ಏಕಾಂಗಿ ಪ್ರತಿಭಟನೆ ನಡೆಸಿದರು.

ಮಂಡ್ಯ ವಿಶ್ವವಿದ್ಯಾನಿಲಯದ ಆಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ನಾಗರಾಜು, ಏ.20ರಂದು ಚುನಾವಣಾ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಇರುವುದರಿಂದ ಕಲಾಭವನವನ್ನು ತೆಗೆದುಕೊಂಡ ಕಾರಣ ಅಂದಿನ ತರಗತಿಗಳನ್ನು ಏ.28ರಂದು ತೆಗೆದುಕೊಳ್ಳುವಂತೆ ಮಂಡ್ಯ ವಿವಿ ಕುಲಸಚಿವರು ಆದೇಶ ಹೊರಡಿಸಿದ್ದರು ಎಂದು ವಿವರಿಸಿದರು.

ಈ ಹಿನ್ನಲೆಯಲ್ಲಿ ಅಂದು ಕರ್ತವ್ಯ ನಿರ್ವಹಿಸಲು ಉಪನ್ಯಾಸಕರು ಮಂಡ್ಯ ವಿವಿಗೆ ತೆರಳಿದಾಗ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಪೊಲೀಸರು ಒಳಗಡೆ ಬಿಡಲಿಲ್ಲ. ನಂತರ ಕೆಲವರನ್ನು ಮಾತ್ರ ಒಳಗೆ ಹೋಗಲು ಅನುಮತಿ ನೀಡಿದರು. ತರಗತಿ ಕೊಠಡಿ ಬಳಿ ಬಂದ ಡಿವೈಎಸ್‌ಪಿ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಅವರು ಉಪನ್ಯಾಸಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಇದನ್ನು ಪ್ರಶ್ನೆ ಮಾಡಿದಾಗ ಉಪನ್ಯಾಸಕರಿಗೆ ಧಮ್ಕಿ ಹಾಕಿದರು. ಆದ್ದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net