ಸ್ವಂತ ಕಾರಿನಲ್ಲಿ ಸರ್ಕಾರಿ ಕಾಲೇಜಿನ ಪ್ರಚಾರ : ವಿದ್ಯಾರ್ಥಿಗಳನ್ನು ಆಕರ್ಷಿಸುವ ಉಪನ್ಯಾಸಕಿಯ ಪ್ರಯತ್ನಕ್ಕೆ ಮೆಚ್ಚುಗೆ

vedashree
ಉಪನ್ಯಾಸಕಿ ವೇದಶ್ರೀ
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಂಟ್ವಾಳ: ಸರ್ಕಾರಿ ಪದವಿ ಕಾಲೇಜು ಬಂಟ್ವಾಳ ಕಾಮಾಜೆ, ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಎಂದು ಕನ್ನಡದಲ್ಲಿ ಹೈಯರ್ ಎಜುಕೇಶನ್ ಫಾರ್ ಎಕ್ಸಲೆನ್ ಎಂದು ಇಂಗ್ಲಿಷ್‌ನಲ್ಲಿ ಬರೆಸಿಕೊಂಡು ಸ್ಟಿಕ್ಕರ್ ಅಂಟಿಸಿರುವ ಕಾರು ಓಡಾಡುವಾಗ ಇದು ಯಾವುದೋ ಖಾಸಗಿ ಕಾಲೇಜಿನ ಪ್ರಚಾರ ತಂತ್ರ ಇರಬಹುದು ಎಂದು ಅನ್ನಿಸಬಹುದು. ಆದರೆ ಇದು ಸರಕಾರಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಉಪನ್ಯಾಸಕಿಯೊಬ್ಬರು ತನ್ನ ಖಾಸಗಿ ಕಾರನ್ನು ಬಳಸಿಕೊಂಡಿರುವ ರೀತಿ.

ಬಿ.ಸಿ.ರೋಡಿನ ಕಾಮಾಜೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ವೇದಶ್ರೀ ನಿಡ್ಯ ತನ್ನ ಸ್ವಂತ ಕಾರಿನಲ್ಲಿ ಹೀಗೊಂದು ಸ್ಟಿಕ್ಕರ್ ಬರಹ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.

ಜನರು ಸ್ವಂತ ವಾಹನಗಳಲ್ಲಿ ತಮ್ಮ ಇಷ್ಟದ ದೇವರ ಹೆಸರು, ಮಕ್ಕಳ ಹೆಸರು ಅಥವಾ ಇಷ್ಟದ ವಾಕ್ಯ ಸ್ಟಿಕರ್ ಮೂಲಕ ಬರೆಸುವುದು ಸಾಮಾನ್ಯ. ಆದರೆ ಉಪನ್ಯಾಸಕಿ ವೇದಶ್ರೀ ಕಾರಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ತಾನು ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವಿದ್ಯಾಸಂಸ್ಥೆ ಹೆಸರು ಬರೆದು ಪ್ರಚಾರ ನೀಡಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ನಡೆಸಿದ್ದಾರೆ.

2015ರಿಂದ ವೇದಶ್ರೀ ನಿಡ್ಯ ಬಂಟ್ವಾಳದ ಕಾಮಾಜೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರ ಭಾಗದಿಂದ ಸ್ವಲ್ವ ದೂರದಲ್ಲಿರುವ ತನ್ನ ವಿದ್ಯಾಸಂಸ್ಥೆ ಬಗ್ಗೆ ಜನರ ಸಾಮಾನ್ಯರಿಗೆ ತಿಳಿಯದೇ ಇರುವುದರಿಂದ 2017ರಲ್ಲಿ ಕಾಲೇಜಿನ ಬಗ್ಗೆ ತನ್ನ ಕಾರಿನಲ್ಲಿ ಸ್ಟಿಕ್ಕರ್ ಬರಹ ಹಾಕಿಸಿಕೊಂಡಿದ್ದರು. ಕಾರು ರಸ್ತೆಯಲ್ಲಿ ಹೋಗುವಾಗ, ಎಲ್ಲಾದರೂ ಪಾರ್ಕಿಂಗ್ ಮಾಡುವಾಗ ಜನರ ಗಮನ ಸೆಳೆಯುತ್ತದೆ. ಆ ಮೂಲಕ ತನ್ನ ವಿದ್ಯಾಸಂಸ್ಥೆ ಜನರಿಗೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಣ್ಣ ಪ್ರಯತ್ನ ಅವರದ್ದಾಗಿತ್ತು. ಆ ಬಳಿಕ ಹೊಸ ಕಾರು ಕೊಂಡಾಗಲೂ ತಕ್ಷಣ ಅದರಲ್ಲೂ ವಿದ್ಯಾಸಂಸ್ಥೆ ಹೆಸರನ್ನು ಬರೆಸಿಕೊಂಡಿದ್ದಾರೆ.

ಮೂಲಸೌಕರ್ಯಗಳಿರುವ ಕಾಲೇಜು

ಈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಬಿ+ ಗ್ರೇಡ್ ನೀಡಿದೆ. ಇಲ್ಲಿ ಬಿ.ಎ., ಬಿ.ಕಾಂ., ಎಂ.ಕಾಂ ತರಗತಿ ಇದ್ದು ಸುಸಜ್ಜಿತವಾದ ಕಟ್ಟಡವಿದೆ, ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿ ಸೌಲಭ್ಯವಿದೆ, ಎನ್‌ಇಪಿ 2020ರಂತೆ 3 ವರ್ಷಗಳ ಪದವಿ ಕೋರ್ಸ್ ಇದ್ದು ನುರಿತ ಪ್ರಾಧ್ಯಾಪಕರಿಂದ ಬೋಧನೆ, ಗ್ರಂಥಾಲಯ ಸೌಲಭ್ಯ, ಕ್ರೀಡೆಗಳಿಗೆ ಪ್ರೋತ್ಸಾಹ, ತರಬೇತಿ, ಕೆಸ್ಸಾರ್ಟಿಸಿ ಬಸ್ ಸೌಲಭ್ಯ, ಬಿಸಿ ಊಟದ ವ್ಯವಸ್ಥೆ ಇದೆ. ಈ ಬಗ್ಗೆ ಕರಪತ್ರ, ಬ್ಯಾನರ್ ಹಾಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಗೆ ಸೆಳೆಯುವ ಪ್ರಯತ್ನ ಪ್ರಾಂಶುಪಾಲರು ಹಾಗೂ ಉಪನ್ಯಾಸಕವರ್ಗದಿಂದ ಒಂದೆಡೆ ನಡೆಯುತ್ತಿದ್ದರೆ ತಮ್ಮ ಸ್ವಂತ ಕಾರಿನಲ್ಲೂ ಬರಹ ಅಂಟಿಸಿ ಸರ್ಕಾರಿ ಕಾಲೇಜಿನತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ವೇದಶ್ರೀ ಅವರು ಆರಂಭದಿಂದಲೇ ತನ್ನ ಕಾರಿನಲ್ಲಿ ಕಾಲೇಜಿನ ಬಗ್ಗೆ ಬರಹ ಬರೆಸಿಕೊಂಡಿದ್ದಾರೆ. ಕಾಲೇಜಿನ ಬಗ್ಗೆ ಅವರಿಗಿರುವ ಅಭಿಮಾನ ಮೆಚ್ಚುವಂತದ್ದು.- ಪ್ರಕಾಶ್ಚಂದ್ರ ಶಿಶಿಲ, ಪ್ರಾಂಶುಪಾಲರು ಸರ್ಕಾರಿ ಪದವಿ ಕಾಲೇಜು, ಬಂಟ್ವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net