ಮ್ಯಾಟ್ರಿಮನಿಯಲ್ಲಿ 4.05 ಲಕ್ಷ ರೂ ಕಳೆದುಕೊಂಡ ಉಪನ್ಯಾಸಕಿ

cen police station
ಶಿವಮೊಗ್ಗ ಸಿಇಎನ್ ಠಾಣೆ
Published on

ಶಿವಮೊಗ್ಗ: ಮ್ಯಾಟ್ರಿಮನಿ ಆ್ಯಪ್‌ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ದುಬಾರಿ ಬೆಲೆಯ ಗಿಫ್ಟ್ ಕಳಿಸುವುದಾಗಿ ಹೇಳಿ ಉಪನ್ಯಾಸಕಿಗೆ ಬರೋಬ್ಬರಿ 4.05 ಲಕ್ಷ ರೂ. ವಂಚಿಸಿದ್ದಾನೆ.

ಡಿವೋರ್ಸ್ ಮ್ಯಾಟ್ರಿಮನಿ ಆ್ಯಪ್‌ನಲ್ಲಿ ಡಾ. ಶಿವ ಎಂಬಾತ ಶಿವಮೊಗ್ಗದ ಉಪನ್ಯಾಸಕಿಗೆ ಪರಿಚಿತನಾಗಿದ್ದಲ್ಲದೆ ಇಂಗ್ಲೆಂಡ್‌ನಲ್ಲಿ ಡಾಕ್ಟರ್ ಆಗಿದ್ದೇನೆಂದು ನಂಬಿಸಿದ್ದ. ಜ.27ರಂದು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್, ಕಾಲ್ ಮಾಡಿ ಮಾತನಾಡಿದ್ದರು. ಜ.30ರಂದು ಇಂಗ್ಲೆಂಡ್‌ನಿಂದ ಸರ್‌ಪ್ರೈಸ್ ಗಿಫ್ಟ್ ಕಳಿಸಿರುವುದಾಗಿ ಆತ ತಿಳಿಸಿದ್ದ. ಜ.31ರಂದು ಉಪನ್ಯಾಸಕಿಗೆ ಕರೆ ಮಾಡಿದ್ದ ವ್ಯಕ್ತಿ ಕೊರಿಯರ್ ಸರ್ವೀಸ್ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇಂಗ್ಲೆಂಡ್‌ನಿಂದ ಕೊರಿಯರ್ ಬಂದಿದ್ದು ಅದಕ್ಕೆ 32,700 ರೂ. ಚಾರ್ಜ್ ಪಾವತಿಸಬೇಕೆಂದು ತಿಳಿಸಿದ್ದ. ಅಕೌಂಟ್ ನಂಬರ್ ಕೂಡ ಕಳುಹಿಸಿದ್ದ. ಬಳಿಕ ವಿವಿಧ ಚಾರ್ಜ್ ಕಟ್ಟಬೇಕೆಂದು 98 ಸಾವಿರ ರೂ. ಹಾಗೂ 2.75 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದ. ನಂತರ ಆದಾಯ ತೆರಿಗೆ ಇಲಾಖೆಗೆ ಪಾವತಿಸಲು 6.70 ಲಕ್ಷ ರೂ. ಕಳುಹಿಸಿ ಎಂದು ಉಪನ್ಯಾಸಕಿಗೆ ಸೂಚಿಸಿದ್ದ. ಇದರಿಂದ ಅನುಮಾನಗೊಂಡು ಉಪನ್ಯಾಸಕಿ ಪರಿಚಿತರಲ್ಲಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net