

ಮಂಡ್ಯ: ಶಾಸಕಾಂಗವನ್ನು ಇನ್ನಷ್ಟು ಬಲಿಷ್ಠಪಡಿಸಬೇಕಾಗಿದೆ. ಅದರಂತೆ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲುಶಿಕ್ಷೆ ವಿಧಿಸುವ ರೀತಿ ಶಾಸನಗಳು ರೂಪುಗೊಳ್ಳಬೇಕು ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ನ್ಯಾಯಾಂಗ ಇಲಾಖೆ ಅಧಿಕಾರಿಗಳು, ವಕೀಲರು ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಅದರೊಟ್ಟಿಗೆ ಪತ್ರಿಕಾರಂಗಗಳು ನಿಸ್ವಾರ್ಥದಿಂದ ಕೆಲಸ ನಿರ್ವಹಿಸಬೇಕಿದೆ. ವಕೀಲರು ನ್ಯಾಯಾಂಗದ ಒಂದು ಭಾಗವಾಗಿದ್ದು, ನ್ಯಾಯಾಂಗವನ್ನು ಬಲಿಷ್ಠ ಪಡಿಸುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿರುತ್ತದೆ. ಹಾಗಾಗಿ ವಕೀಲರು ಆತ್ಮಸ್ಟೈರ್ಯದಿಂದ ಕೆಲಸ ನಿರ್ವಹಿಸಿ. ಕಾರ್ಯಾಂಗವನ್ನು ಪಾಲಿಸುವುದು ಅಧಿಕಾರಿಗಳ ಕರ್ತವ್ಯ. ಅಧಿಕಾರಿಗಳು ತಮಗೆ ನೀಡುವ ಸಂಬಳವನ್ನು ಹೇಗೆ ಪ್ರೀತಿಸುತ್ತಾರೋ ಹಾಗೆಯೇ ತಮಗೆ ನೀಡುವ ಕರ್ತವ್ಯಗಳನ್ನು ಸಹ ಪ್ರೀತಿಸಬೇಕಿದೆ. ಪಡೆದುಕೊಳ್ಳುವ ಸಂಬಳಕ್ಕಾದರೂ ನ್ಯಾಯ ಒದಗಿಸುವಂತೆ ಕಾರ್ಯನಿರ್ವಹಿಸಿ ಎಂದರು.
ಪತ್ರಿಕಾರಂಗವು ಶಕ್ತಿಯುತವಾದ ಕ್ಷೇತ್ರವಾಗಿದ್ದು, ಒಂದು ಲೇಖನಿಯಿಂದ ಸಮಾಜದ ತೊಂದರೆಗಳನ್ನು ಸರಿಪಡಿಸಬಹುದು. ಮಾಧ್ಯಮಗಳು ಯಾವುದೇ ಆಮಿಷಕ್ಕೂ ಬಲಿಯಾಗಬಾರದು. ಪ್ರತಿದಿನ ಮಾಧ್ಯಮಗಳಲ್ಲಿ ಸೈನಿಕರನ್ನು ಕುರಿತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಯುವಜನತೆಯಲ್ಲಿ ದೇಶಪ್ರೇಮವನ್ನು ತುಂಬಿ ಎಂದು ಸಲಹೆ ನೀಡಿದರು.
ಸಾರ್ವಜನಿಕರಲ್ಲಿ ಕಾನೂನು ಅರಿವಿನ ಕೊರತೆ ಇದೆ. ಆದ್ದರಿಂದ ಜಿಲ್ಲೆಯಲ್ಲಿನ ನ್ಯಾಯಾಧೀಶರು ತಿಂಗಳಿಗೆ ಒಂದೆರಡು ಬಾರಿ ಹಳ್ಳಿಗಳಿಗೆ ಭೇಟಿ ನೀಡಿ ಕಾನೂನಿನ ಬಗ್ಗೆ ಅರಿವು ಮೂಡಿಸಿ. ಹಿರಿಯ ನ್ಯಾಯಾಧೀಶರು, ವಕೀಲರು ತಮ್ಮ ಕಾನೂನಿನ ಕೆಲಸದ ಜತೆಗೆ ಸಮಾಜ ಸೇವೆಯನ್ನು ಸಹ ಮಾಡಬೇಕಾಗಿದೆ. ಜನರ ನೋವು ಹಾಗೂ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಯುವ ವಕೀಲರು ನ್ಯಾಯಾಂಗದ ಬೆನ್ನೆಲುಬು ಇದ್ದಂತೆ. ಮೊದಲಿಗೆ ನಿಮ್ಮನ್ನು ನೀವು ನಂಬಿದಾಗ ಯಶಸ್ಸು ನಿಮ್ಮದಾಗುತ್ತದೆ. ಕೆಚ್ಚೆದೆಯಿಂದ, ನಿಸ್ವಾರ್ಥವಾಗಿ, ಶ್ರದ್ದೆಯಿಂದ ಹಾಗೂ ನ್ಯಾಯಯುತವಾಗಿ ಜನರ ಸೇವೆ ಸಲ್ಲಿಸಿ. ನಿಮ್ಮಲ್ಲಿ ನ್ಯಾಯ ಬೇಡುವವರಿಗೆ ಅನ್ಯಾಯವಾಗಬಾರದು ಎಂದು ತಿಳಿವಳಿಕೆಯ ಮಾತುಗಳನ್ನು ಹೇಳಿದರು.
ಲೋಕಾಯುಕ್ತ ರಾಷ್ಟ್ರದಲ್ಲಿಯೇ ಬಲಿಷ್ಠವಾದ ಸಂಸ್ಥೆ. ಅನ್ಯಾಯ, ಭ್ರಷ್ಟಾಚಾರ ಹಾಗೂ ದುರಾಡಳಿತ ಕಂಡುಬಂದಲ್ಲಿ ಹಿಂಜರಿಯದೆ, ಹೆದರದೆ ಕ್ರಮ ಕೈಗೊಳ್ಳುತ್ತದೆ. ಜನರ ಸೇವೆ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ. ಆದ್ದರಿಂದ ಕರ್ತವ್ಯ ನಿಭಾಯಿಸದೆ ಲೋಕಾಯುಕ್ತ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗ ಬೇಡಿ ಎಂದು ಎಚ್ಚರಿಸಿದರು.
ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬೃಂಗೇಶ್ ಮಾತನಾಡಿ, ವಕೀಲರು ಸಾರ್ವಜನಿಕರ ಕಷ್ಟವನ್ನು ಅರಿಯುವ ಗುಣ ಬೆಳೆಸಿಕೊಳ್ಳಬೇಕಾಗಿದೆ. ಕಷ್ಟವನ್ನು ಅರಿತಾಗ ನ್ಯಾಯದ ಅರಿವಾಗುತ್ತದೆ. ಹಾಗಾಗಿ ಸಮಾಜದಲ್ಲಿನ ಕುಂದು ಕೊರತೆಯನ್ನು ಹೋಗಲಾಡಿಸಲು, ಸಮಸ್ಯೆಗಳನ್ನು ಹೋಗಲಾಡಿಸಲು ಕೈಜೋಡಿಸಿ ಎಂದರು.
ಲೋಕಾಯುಕ್ತದ ಉಪ ನಿಬಂಧಕರಾದ ಅರವಿಂದ್, ಮಿಲನಾ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಹಿರಿಯ ಸಿವಿಲ್ ನ್ಯಾಯಾಧೀಶರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.