ಅರಿವಿನ ಬೆಳಕಿಂದ ಮನದ ಅಂಧಕಾರ ದೂರ...

Karantha 1
Published on

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಮತ

ಕಾರಂತರ ಬದುಕು-ಬರಹ ಉಪನ್ಯಾಸ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಾವುದೇ ಮೂಲದಿಂದಾರೂ ಅರಿವಿನ ಬೆಳಕು ಹರಿದಾಗ ಮನದ ಅಂಧಕಾರ ಕಳೆಯುತ್ತದೆ. ಸಾರಸ್ವತ ಲೋಕದಲ್ಲಿ ಡಾ. ಕೋಟ ಶಿವರಾಮ ಕಾರಂತರು ಸೂರ್ಯನ ಬೆಳಕಿನಂತೆ ಜ್ಞಾನಗಳ ಮಾಲೆಯನ್ನೆ ಪೋಣಿಸಿದ್ದಾರೆ. ಸಾಹಿತ್ಯದಲ್ಲಿ ಎಲ್ಲ ಪ್ರಕಾರದ, ಎಲ್ಲ ವಿಭಾಗದ ವಿಚಾರ ಹಾಗೂ ವಿಷಯವನ್ನು ಅಕ್ಷರ ರೂಪದಲ್ಲಿ ಇಳಿಸಿದ್ದು, ಆ ಮೂಲಕ ನಮ್ಮೊಂದಿಗೆ ಕಾರಂತರು ಚಿರಸ್ಥಾಯಿಯಾಗಿಯೇ ಇರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿರುವ ರೆಡ್​ ಕ್ರಾಸ್​ ಭವನದ ಹೆನ್ರಿ ಡುನ್ಯಾಂಟ್​ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಡಾ. ಶಿವರಾಮ ಕಾರಂತ ಟ್ರಸ್ಟ್​ ವತಿಯಿಂದ ಹಾಗೂ ರಥಬೀದಿ ಗೆಳೆಯರು (ರಿ.) ಉಡುಪಿ ಸಹಕಾರದಲ್ಲಿ ಜುಲೈ 22ರಂದು ಸಂಜೆ ಆಯೋಜಿಸಿದ್ದ ಅರಿವಿನ ಬೆಳಕು ಉಪನ್ಯಾಸ ಮಾಲೆ-7 ಉದ್ಘಾಟಿಸಿ ಮಾತನಾಡಿದರು.

ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಭಾಷಾ ವಿಜ್ಞಾನಿ ನಾಡೋಜ ಡಾ. ಕೆ.ಪಿ. ರಾವ್​, ರಥಬೀದಿಯ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶಕುಮಾರ್​, ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್​ ಉಪಸ್ಥಿತರಿದ್ದರು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಡಾ. ನಿಕೇತನಾ ಕಾರ್ಯಕ್ರಮ ನಿರೂಪಿಸಿದರು.

21ನೇ ಶತಮಾನದಲ್ಲೂ 'ಕಡಲ ಭಾರ್ಗವ' ಪ್ರಸ್ತುತ

Karantha 2
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಡಾ. ಶಿವರಾಮ ಕಾರಂತರ ಬದುಕು ಮತ್ತು ಬರಹಗಳ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು. 20ನೇ ಶತಮಾನದಲ್ಲಿ ಹುಟ್ಟಿರುವ ಕಾರಂತರು ಆ ಶತಮಾನ ಪೂರ್ಣ ಕಳೆದಿದ್ದು, 21ನೇ ಶತಮಾನದ ಕೊನೆಯವರೆಗೂ ಸಹ ಅವರು ಬಿಟ್ಟು ಹೋದ ಸಾಹಿತ್ಯದ ಮೂಲಕ ಕಡಲ ಭಾರ್ಗವ ಪ್ರಸ್ತುತರಾಗಿರುತ್ತಾರೆ. 1931ರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ನೆಲದ ಸಮಸ್ಯೆ ಇರುವುದು ಬ್ರಿಟಿಷರಿಂದಲ್ಲ ಎಂಬ ಹೊಸ ಕಲ್ಪನೆ, ಸಾಮಾಜಿಕ ಪ್ರಜ್ಞೆಯನ್ನು ಚೋಮನ ದುಡಿ ಕಾದಂಬರಿ ಮೂಲಕ ಅನಾವರಣಗೊಳಿಸಿದರು. ದಲಿತರ ನೋವನ್ನು ಸಾಹಿತ್ಯದ ಮೂಲಕ ಮನೋಜ್ಞವಾಗಿ ಬಿತ್ತರಿಸಿದ್ದಾರೆ. ಚೋಮನ ದುಡಿ ಸಿನಿಮಾ ನೋಡಿದರೆ ಕಾರಂತರ ಸಾಹಿತ್ಯಶಕ್ತಿ ಕಣ್ಣೆದುರಿಗೆ ಬರುತ್ತದೆ. ಮಂಜುಳೆಯ ಜೀವನ ಕುರಿತ ಗಂಡಸರು ಎಂಬ ಕಾದಂಬರಿ ಮೂಲಕ ಮಹಿಳಾ ಸಾಹಿತ್ಯದ ಬೀಜ ಬಿತ್ತಿದವವರು. ಪರಿಸರವನ್ನು ಉದ್ಯಮವನ್ನಾಗಿ ನೋಡದೆ ತನ್ನೊಳಗೆ ಜೈವಿಕವನ್ನಾಗಿಸಿಕೊಂಡು ರಕ್ಷಣೆಗೆ ಅಪಾರ ಹೋರಾಟ, ಧೈರ್ಯ ತೋರಿದ್ದರು. ಅದು ಬೆಟ್ಟದ ಜೀವ ಎಂಬ ಕಾದಂಬರಿ ಮೂಲಕ ತೆರೆದಿಟ್ಟರು. ಯಕ್ಷಗಾನ ಕಲೆ ರಕ್ಷಿಸಿದ್ದೂ ಸಹ ಕಾರಂತರೇ. ತಮ್ಮ ಜೀವಿತಾವಧಿಯಲ್ಲಿ 450ಕ್ಕೂ ಹೆಚ್ಚು ಜ್ಞಾನಮಯ ಪುಸ್ತಕ ಬರೆದಿದ್ದಾರೆ ಎಂದು ತಿಳಿಸಿದರು. ಬಳಿಕ ಸಂವಾದದಲ್ಲಿ ಕಾರಂತರ ಕುರಿತಾಗಿ ಕೇಳಿ ಬಂದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net