

ನರಗುಂದ: ಶಿಕ್ಷಕರು ದೇಶದ ಆಧಾರಸ್ತಂಭಗಳಿದ್ದಂತೆ. ಸಮಾಜದ ಬಹುಮುಖ್ಯವಾದ ಜವಾಬ್ದಾರಿ ಇವರ ಮೇಲಿದೆ. ಶಿಕ್ಷಕರು ಪಾಠ ಬೋಧನೆ ಮಾಡುವುದರ ಜತೆಗೆ ಅನೇಕ ಕಾರ್ಯಗಳನ್ನು ಮಾಡಬೇಕಾದ ಪ್ರಸಂಗಗಳು ಬರುತ್ತಿವೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಮಠದ 350ನೇ ಮಾಸಿಕ ಶಿವಾನುಭವ, ನಿವೃತ್ತ, ಉತ್ತಮ ಶಿಕ್ಷಕರಿಗೆ ಸನ್ಮಾನ, ಚೆಂಬೆಳಕು ಚೆಲ್ಲಿದವರು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬರೂ ಮೊಬೈಲ್ ತಂತ್ರಜ್ಞಾನಕ್ಕೆ ಆಯಸ್ಕಾಂತದಂತೆ ಅಂಟಿಕೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ವಿಕಾಸಕ್ಕೆ ರಹದಾರಿ ಬದಲಾಗಿ ಅಡ್ಡದಾರಿ ಮಾಡಿಕೊಡುತ್ತಿದ್ದೇವೆ. ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ವ್ಯವಸ್ಥೆ ಸದೃಢವಾಗಿರಬೇಕು. ಆ ನಿಟ್ಟಿನಲ್ಲಿ ಶಿಕ್ಷಕರ ಜತೆಗೆ ಪೋಷಕರು ತಮ್ಮ ಮಕ್ಕಳ ಮೇಲೆ ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.
ಸಾಹಿತಿ ಪಿ.ಎಲ್. ಮೀಸಾಳೆ ಮಾತನಾಡಿ, ವೈಜ್ಞಾನಿಕ ದೃಷ್ಟಿಕೋನ ಹೊಂದಿರುವ ಶ್ರೀಮಠ ನವೀನ ವಿಚಾರಗಳೊಂದಿಗೆ ಸಮಾಜದಲ್ಲಿ ಕ್ರಾಂತಿ ಮಾಡುತ್ತಿದೆ. ಶಾಂತಲಿಂಗ ಶ್ರೀಗಳು ಕನ್ನಡವನ್ನೇ ಮುಖ್ಯ ಧ್ಯೇಯವಾಗಿಸಿಕೊಂಡು ನಾಡು- ನುಡಿ, ನೆಲ-ಜಲಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಶಾಂತಲಿಂಗ ಶ್ರೀಗಳು, ಕಿತ್ತಲಿ ಸಿದ್ರಾಮೇಶ್ವರ ಮಠದ ಮಂಜುನಾಥ ಶ್ರೀಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ ಮಾತನಾಡಿದರು. ಅಮರೇಶ ತೆಗ್ಗಿನಮನಿ, ಪ್ರೊ. ಆರ್.ಎಚ್. ತಿಗಡಿ, ನಿವೃತ್ತ ಉಪತಹಸೀಲ್ದಾರ್ ವಿ.ಜಿ. ಐನಾಪೂರ, ರೇವಣಸಿದ್ದಯ್ಯ ಹಿರೇಮಠ, ನೀಲಮ್ಮ ಜಲ್ಲಿ, ಶಿವಲಿಂಗವ್ವ ಐನಾಪೂರ, ಪಿ.ಸಿ. ಮೂಲಿಮನಿ, ಎನ್.ಆರ್. ಮೊರಬದ, ಇತರರಿದ್ದರು.