ರಾಸಾಯನಿಕ ಬಿಟ್ಟು ಸಾವಯವ ಕೃಷಿಗೆ ಮರಳಿ

04-JULY-GPT-1
Published on

ಗುಂಡ್ಲುಪೇಟೆ: ಭಾರತೀಯ ಸಂಸ್ಕೃತಿಯ ಜೀವನಾಡಿಯಾದ ಕೃಷಿ ಮತ್ತು ಹೈನುಗಾರಿಕೆಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಭಾರತೀಯ ಕಿಸಾನ್ ಸಂಘಟನೆಯ ಪ್ರಾಂತ್ಯ ಕಾರ್ಯಕಾರಿಣಿ ಮುಖಂಡ ಡಾ.ಯೋಗೇಂದ್ರ ಸಲಹೆ ನೀಡಿದರು.

ತಾಲೂಕಿನ ಕಂದೇಗಾಲ ಸಮೀಪದ ಸ್ಕಂದಗಿರಿ ಪಾರ್ವತಾಂಬ ದೇವಾಲಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭಾರತೀಯ ಕಿಸಾನ್ ಸಂಘದ ಗುಂಡ್ಲುಪೇಟೆ ತಾಲೂಕು ಘಟಕದ ಅಭ್ಯಾಸ ವರ್ಗದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಕಿಸಾನ್ ಸಂಘಟನೆಯು ದೇಶಾದ್ಯಂತ ಘಟಕಗಳನ್ನು ಹೊಂದಿದೆ. ಸಂಘಟನೆಯು ರೈತರನ್ನು ಸಂಘಟಿಸುವ ಜತೆಗೆ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಾ ಬಂದಿದೆ. ಗಡಿ ತಾಲೂಕಾದ ಗುಂಡ್ಲುಪೇಟೆಯಲ್ಲೂ ಕೃಷಿ ಕ್ಷೇತ್ರ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದ್ದರಿಂದ ರೈತರು ಸಂಘಟಿತರಾಗಿ ನೇರ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಬೇಕು. ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಕೈಬಿಟ್ಟು ಗೋ ಆಧಾರಿತ ಮತ್ತು ಸಾವಯವ ಕೃಷಿ ಕಡೆಗೆ ಮರಳಬೇಕು. ಹಾಗೂ ಕೃಷಿ ಕ್ಷೇತ್ರಕ್ಕೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘಟನೆಯ ತಾಲೂಕು ಅಧ್ಯಕ್ಷ ಕೆ.ಎಲ್.ಮಹದೇವಸ್ವಾಮಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳ ರೈತರು ಎದುರಿಸುತ್ತಿರುವ ಹಲವು ಸವಾಲುಗಳ ನಿವಾರಣೆಗೆ ಸಂಘಟನೆ ಶ್ರಮಿಸುತ್ತಾ ಬಂದಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳಿಂದ ಆಗುತ್ತಿರುವ ಬೆಳೆಹಾನಿ, ಅರಣ್ಯ ಇಲಾಖೆಯಿಂದ ಬೆಳೆನಷ್ಟ ವಿತರಣೆ ವಿಳಂಬ, ಗ್ರಾಮಾಂತರ ಪ್ರದೇಶಗಳಿಗೆ ಅವಶ್ಯಕ ಪ್ರಮಾಣದಲ್ಲಿ ಸಾರಿಗೆ ಬಸ್ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಸಿಎಸ್‌ಪಿ ರವಿ, ತಾಲೂಕು ಕಾರ್ಯದರ್ಶಿ ದೊಡ್ಡತುಪ್ಪೂರು ಶಶಿ, ಚಾಮರಾಜನಗರ ತಾಲೂಕು ಕಾರ್ಯದರ್ಶಿ ಲಿಂಗರಾಜು, ಪ್ರಗತಿಪರ ರೈತರಾದ ಶಿಂಡನಪುರ ಶಾಂತಪ್ಪ, ಅಂಕಹಳ್ಳಿ ವೀರಭದ್ರಪ್ಪ, ಮೊಳ್ಳಯ್ಯನಹುಂಡಿ ಪ್ರಕಾಶ್, ಮಂಜಪ್ಪ, ಮಹದೇವಪ್ಪ, ಕಂದೇಗಾಲ ಗುರುಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net