

ಕಿಕ್ಕೇರಿ: ಪತ್ರಿಕೆಗಳು ಮಸ್ತಕವನ್ನು ವೃದ್ಧಿಸುವ ಜ್ಞಾನ ಭಂಡಾರವಾಗಿವೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಕೆ. ದೇವರಾಜು ತಿಳಿಸಿದರು.
ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ಮೊಬೈಲ್ ಬಿಡಿ, ಪತ್ರಿಕೆ, ಪುಸ್ತಕ ಓದಿ ಜ್ಞಾನ ವೃದ್ಧಿಸಿಕೊಳ್ಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು ಹೆಮ್ಮೆ ಇದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸಹಜವಾಗಿ ಉಜ್ವಲ ಭವಿಷ್ಯವಿದೆ. ಅವರಿಗೆ ಪ್ರೋತ್ಸಾಹಿಸುವ ಕೆಲಸ ಮೊದಲು ಆಗಬೇಕಿದೆ. ಸರ್ಕಾರಿ ಶಾಲೆ ಉಳಿದರೆ ಭವಿಷ್ಯದ ಮಕ್ಕಳ ಸಮಗ್ರ ಭದ್ರತೆ ಸಾಧ್ಯ. ಜ್ಞಾನದ ಹಸಿವಿನ ಮಕ್ಕಳಿಗೆ ಸಮಗ್ರ ಮಾಹಿತಿ ತುಂಬಾ ಬೇಕಿದ್ದು ಪತ್ರಿಕೆ, ಪುಸ್ತಕಗಳಿಂದ ಖಂಡಿತ ಸಾಧ್ಯವಾಗಲಿದೆ ಎಂದರು.
ಮೊಬೈಲ್, ಟಿವಿ ಮಕ್ಕಳನ್ನು ಮಾನಸಿಕ ಖಿನ್ನತೆಗೆ ದೂಡಲಿದೆ. ಮೊಬೈಲ್ ವ್ಯಸನಿಗಳನ್ನಾಗಿ ಮಾಡಲಿದ್ದು, ಇದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಭವಿಷ್ಯ, ಆರೋಗ್ಯ ಎಲ್ಲವನ್ನು ಹಾಳು ಮಾಡುವ, ಕ್ಷಣಿಕ ಆಕರ್ಷಣೆ ನೀಡುವ ಅಪಾಯಕರವಾದ ಸಂಗತಿಗಳಿಂದ ದೂರವಿರಿಸಲು ಶಿಕ್ಷಕರಷ್ಟೆ ಪಾಲಕರ ಪಾತ್ರ ಬಲುಮುಖ್ಯ. ದಿನಪತ್ರಿಕೆಯಲ್ಲಿ ನೂರಾರು ಶೈಕ್ಷಣಿಕ, ಪಠ್ಯ ವಿಷಯ ಮಾಹಿತಿ ಲಭ್ಯವಿದೆ. ಸ್ಪರ್ಧಾ ಪ್ರಪಂಚದಲ್ಲಿ ಓದಿದಷ್ಟು ಜ್ಞಾನ ವೃದ್ಧಿಸಲಿದೆ. ಮಕ್ಕಳ ಶೈಕ್ಷಣಿಕ ವಿಷಯಕ್ಕೆ ಪತ್ರಿಕೆಯಂತಹ ಪಠ್ಯಕ್ಕೆ ಅನುಕೂಲವಾಗುವ ಸಲಕರಣೆ ನೀಡಲು ಬದ್ಧನಿರುವುದಾಗಿ ತಿಳಿಸಿದರು.
ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ಮಕ್ಕಳು ಸಾತ್ವಿಕ ಆಹಾರ, ಉತ್ತಮ ದಿನಚರಿ, ಗುರುಹಿರಿಯರಲ್ಲಿ ಭಕ್ತಿ ರೂಢಿಸಿಕೊಳ್ಳಿ. ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿದ್ದು, ದಾನಿಗಳ ಸಹಕಾರ ಸಿಗಲಿದ್ದು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯದ ಮಕ್ಕಳಾಗಿ ಎಂದು ಹಿತನುಡಿದರು.
ಎನ್‌ಸಿಸಿ ಘಟಕಾಧಿಕಾರಿ ಎಸ್.ಎಂ. ಬಸವರಾಜು, ಬಿ.ಎನ್. ಪರಶಿವಮೂರ್ತಿ, ಸುರೇಶ್, ದೀಪಕ್, ಪ್ರಸನ್ನ, ಶ್ರೀಕಾಂತ್ ಚಿಮ್ಮಲ್ ಮತ್ತಿತರರಿದ್ದರು.