ಅಹಂ ಬಿಟ್ಟು ಮಾನವೀಯತೆಯಿಂದ ಕೆಲಸ ಮಾಡಿ

klr
Published on

ಕೋಲಾರ: ರೋಗಿಯೇ ವೈದ್ಯನ ಪಾಲಿನ ದೈವ, ಆಸ್ಪತ್ರೆ ದೇಗುಲ ಎನಿಸಿದರೆ ನಾವು ಅದರ ಪೂಜಾರಿಗಳು. ಅಹಂ ಬಿಟ್ಟು ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ಬೆಂಗಳೂರಿನ ಕಿದ್ವಾಯಿ ಸಂಸ್ಥೆಯ ಮಾಜಿ ನಿರ್ದೇಶಕಿ, ಪದ್ಮಶ್ರೀ ಡಾ.ವಿಜಯಲಕ್ಷಿ$್ಮ ದೇಶಮಾನೆ ಹೇಳಿದರು.

ನಗರ ಹೊರವಲಯದ ಆರ್​.ಎಲ್​.ಜಾಲಪ್ಪ ರಜತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 15ನೇ ಘಟಿಕೋತ್ಸವದಲ್ಲಿ ಮಾತನಾಡಿದರು.

ಮಾತಿನಲ್ಲಾಗಲಿ, ಕಾಯಕದಲ್ಲಾಗಲಿ ಬೇರೆಯವರಿಗೆ ಯಾವುದೇ ಕಾರಣಕ್ಕೂ ಕೇಡು ಬಯಸಬೇಡಿ, ನೋವು ಕೊಡಬೇಡಿ. ವೈದ್ಯರಾದವರ ಗುರಿ ಹಾಗೂ ಪ್ರಮುಖ ಆದ್ಯತೆ ರೋಗಿಯ ಆರೈಕೆ ಆಗಿರಬೇಕು. ಶಿಕ್ಷಕರು ಹಾಗೂ ಪಾಲಕರನ್ನು ಗೌರವಿಸಿ ಎಂದು ಕಿವಿಮಾತು ಹೇಳಿದರು.

ಸಮಾಜ ಬಯಸುವುದು ಶ್ರೇಷ್ಠ ವೈದ್ಯರನ್ನು ಅಲ್ಲ, ಬದಲಾಗಿ ಹೃದಯವಂತ ವೈದ್ಯರನ್ನು. ವೈದ್ಯರಾದ ನಮ್ಮನ್ನು ಸಮಾಜ ಬರೀ ಚಿಕಿತ್ಸೆಗಾಗಿ ನೋಡಲ್ಲ, ನೆಮ್ಮದಿ, ನಂಬಿಕೆ ಸೇರಿ ವಿವಿಧ ಕಾರಣಗಳಿಗೆ ನಮ್ಮತ್ತ ನೋಡುತ್ತದೆ. ಆ ಅಂಶ ನಮ್ಮ ಮನದಲ್ಲಿರಬೇಕು ಎಂದು ಸಲಹೆ ನೀಡಿದರು.

ಕುಲಪತಿ ಡಾ.ಬಿ.ವೆಂಗಮ್ಮ ಸಂಸ್ಥೆಯ ಶೈಕ್ಷಣಿಕ ಸಾಲಿನ ವರದಿ ವಾಚಿಸಿದರು. ಒಟ್ಟು 377 ಮಂದಿಗೆ ಪದವಿ ಹಾಗೂ 23 ಮಂದಿ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಎಂಬಿಬಿಎಸ್​ನ ಫೇಸ್​ 1, ಫೇಸ್​ 2 ಫೇಸ್​ 3ನಲ್ಲಿ ಒಟ್ಟು 3 ಚಿನ್ನದ ಪದಕಗಳಿಗೆ ಡಾ.ಗಾಯತ್ರಿ, ಎಂಬಿಬಿಎಸ್​ ಫೇಸ್​-2, 3ನಲ್ಲಿ ಡಾ.ಪಲ್ಕಿತ್​ ಸೈನಿ ಎರಡು ಚಿನ್ನದ ಪದಕಗಳಿಗೆ ಪಾತ್ರರಾದರು. ಐವರಿಗೆ ಡಾಕ್ಟರೇಟ್​ ಪ್ರದಾನ ಮಾಡಲಾಯಿತು.

ಶ್ರೀ ದೇವರಾಜ ಅರಸು ಶೈಕ್ಷಣಿಕ ಟ್ರಸ್ಟ್​ನ ಉಪಾಧ್ಯಕ್ಷ ಜೆ.ರಾಜೇಂದ್ರ, ಕುಲಸಚಿವ ಡಾ.ಸಿ.ಮುನಿನಾರಾಯಣ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್​.ಎನ್​.ಪ್ರಸಾದ್​, ಪರೀಕ್ಷಾಂಗ ನಿಯಂತ್ರಣಾಧಿಕಾರಿ ಡಾ.ಕೆ.ಶಶಿಧರ್​, ಪ್ರಾಂಶುಪಾಲ ಡಾ.ಕೆ.ಪ್ರಭಾಕರ್​, ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ.ಸುಧಾ, ರಾಜೇಶ್​ ಜಗದಾಳೆ, ಡಾ.ಮಂಜುನಾಥ್​, ಡೀನ್​ ಡಾ.ಅರವಿಂದ ನಟರಾಜನ್​, ಡಾ.ಅಭಯ್​, ಟ್ರಸ್ಟಿಗಳಾದ ಸಿ.ಹನುಮಂತರಾಜು, ಮೃನಾಳಿನಿ, ವಿನಯ್​ಶ್ಯಾಮ್​, ಶರಶ್ಚಂದ್ರ, ವೈದ್ಯಕಿಯ ಅಧೀಕ್ಷಕ ಡಾ.ಕೃಷ್ಣಪ್ಪ ಇದ್ದರು.

ಸಿಎಂಗೆ ಗೌರವ ಡಾಕ್ಟರೇಟ್​ ಘೋಷಣೆ

ಸಮಾಜ ಸೇವೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿ ಜಿ.ಎಚ್​.ನಾಗರಾಜ ಗೌರವ ಡಾಕ್ಟರೇಟ್​ ಪದವಿ ಘೋಷಿಸಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿ 16 ಬಾರಿ ಬಜೆಟ್​ ಮಂಡಿಸಿರುವ ಇತಿಹಾಸ ಇದೆ. ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ, ಜನರ ಹಸಿವನ್ನು ನಿಗಿಸಿರುವ ಅನ್ನದಾತ ಎಂದರೆ ತಪ್ಪಾಗಲಾರದು. ಅವರ ಅಧಿಕಾರ, ದಿಟ್ಟತನ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net