ಕಾವಿ ಬಿಟ್ಟು ಚರ್ಚೆಗೆ ಬನ್ನಿ-ರಾಜಕೀಯಕ್ಕೂ ಸ್ವಾಗತ, ಕನ್ಹೇರಿ ಶ್ರೀಗಳಿಗೆ ಎಸ್.ಎಂ. ಪಾಟೀಲ ಗಣಿಹಾರ ಆಹ್ವಾನ

GANIHAR PRESS MEET KANHERI
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಡಾ.ರವಿಕುಮಾರ ಬಿರಾದಾರ, ನಾಗರಾಜ ಲಂಬು, ಫಯಾಜ್ ಕಲಾದಗಿ ಇದ್ದಾರೆ.
Published on

ವಿಜಯಪುರ: ಕಾವಿ ಎಂಬುದು ತ್ಯಾಗದ ಸಂಕೇತ. ಅರಿಷಡ್ವರ್ಗಗಳನ್ನು ತ್ಯಜಿಸಿದವರು ಧರಿಸಿಕೊಳ್ಳುವ ಶ್ರೇಷ್ಠ ವಸ್ತ್ರ. ಅಂಥ ಪವಿತ್ರ ಕಾವಿ ಧರಿಸಿ ಸಮಾಜದಲ್ಲಿ ದ್ವೇಷ ಮನೋಭಾವ ಬಿತ್ತುತ್ತಿರುವ ಕನ್ಹೇರಿಯ ಕಾಡಸಿದ್ಧೇಶ್ವರ ಶ್ರೀಗಳು ಕಾವಿ ತ್ಯಜಿಸಿ ರಾಜಕಾರಣಕ್ಕೆ ಬರುವುದಾದರೆ ಸ್ವಾಗತಿಸುವುದಲ್ಲದೇ ವಕ್ಫ್‌ಗೆ ಸಂಬಂಧಿಸಿದ ಮುಕ್ತ ಚರ್ಚೆಗೆ ಸ್ವಾಮೀಜಿ ಸಿದ್ಧಪಡಿಸುವ ಅಖಾಡಕ್ಕೆ ಚರ್ಚೆಗೆ ಸದಾ ಸಿದ್ಧ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.

ವಕ್ಫ್ ವಿರೋಧಿಸಿ ಈಚೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಮುಸ್ಲಿಂ ಧರ್ಮದ ಕುರಿತು ಮಾತನಾಡಿದ ಕನ್ಹೇರಿ ಶ್ರೀಗಳ ವಿಡಿಯೋ ತುಣುಕುಗಳನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿ ಅವರು ಪ್ರತಿಕ್ರಿಯೆ ನೀಡಿದರು.

ಈ ದೇಶದಲ್ಲಿ ಕಾವಿಗೆ ಭವ್ಯ ಪರಂಪರೆ ಇದೆ, ಸನ್ಯಾಸತ್ವಕ್ಕೆ ತಲೆ ಬಾಗುವುದು ನಮ್ಮ ಭಾರತೀಯ ಸಂಸ್ಕೃತಿ, ಶ್ರೀಗಳು ಕಾವಿಗೆ ಅವಮಾನ ಮಾಡುತ್ತಿದ್ದಾರೆ. ಕನ್ಹೇರಿ ಶ್ರೀಗಳ ಕಾವಿ ವಿರೋಧಿ ನಡೆಯನ್ನು ಹಿಂದು ಧರ್ಮದ ಮಠಾಧೀಶರು ಖಂಡಿಸಬೇಕೆಂದರಲ್ಲದೇ, ಕನ್ಹೇರಿ ಶ್ರೀಗಳ ಅವಾಚ್ಯ ನುಡಿಗಳು ಕಾವಿಗೆ ಅಗೌರವ ತರುತ್ತಿವೆ. ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಸನ್ಯಾಸತ್ವ ಬಿಟ್ಟು ರಾಜಕಾರಣಕ್ಕೆ ಬರಲಿ ಅವರೊಂದಿಗೆ ಎಲ್ಲ ರೀತಿಯ ಚರ್ಚೆಗೆ ಸಿದ್ಧ ಎಂದರು.

ಮುಸ್ಲಿಂರಿಗೆ ಐವತ್ತು ಹೆಂಡಿರು, ಹಿಂದುಗಳ ತೆರಿಗೆ ಹಣದಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಮುಸ್ಲಿಂರು ಸಂಚಾರ ಮಾಡುತ್ತಾರೆ ಎಂದೆಲ್ಲ ಶ್ರೀಗಳು ಟೀಕೆ ಮಾಡಿದ್ದಾರೆ. ಮುಸ್ಲಿಮರು ಸಹ ಈ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ, ಮಡಿದಿದ್ದಾರೆ ಎಂಬುದನ್ನು ಶ್ರೀಗಳು ಇಂಡಿಯಾ ಗೇಟ್ ಬಳಿ ಹೋಗಿ ನೋಡಿದರೆ ಗೊತ್ತಾಗುತ್ತದೆ. ತೆರಿಗೆ ಸಹ ತೆರಿಗೆ ಕಟ್ಟುತ್ತಾರೆ. ಅವರ ತೆರಿಗೆ ಹಣದಲ್ಲಿ ಸರ್ಕಾರ ಜಾರಿಗೊಳಿಸುವ ಸೌಲಭ್ಯ, ಸಹಾಯಧನ, ಕಾಮಗಾರಿಗಳನ್ನು ಪೂಜ್ಯರು ಬಳಸುವುದಿಲ್ಲವೇ? ಎಂದರು.

ಕನ್ಹೇರಿ ಶ್ರೀಗಳು ರೈತರ ಹೋರಾಟಕ್ಕೆ ಬಂದಿದ್ದರೋ ಅಥವಾ ಮುಸ್ಲಿಂರ ವಿರುದ್ದ ಮಾತನಾಡಲು ಬಂದಿದ್ದರೋ? ತಿಳಿಯದಾಗಿದೆ. ಹೋರಾಟದಲ್ಲಿ ರೈತರ ಹೆಸರೇ ತೆಗೆದುಕೊಳ್ಳಲಿಲ್ಲ, ಅವರು ಯಾವ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬ ಪರಿಜ್ಞಾನ ಸಹ ಅವರಿಗೆ ಇರಲಿಲ್ಲ ಎಂದರು.

ದೇವಾಲಯ ಆಸ್ತಿ ಸಂರಕ್ಷಿಸೋಣ

ಹಿರಿಯ ಅಧಿಕಾರಿ ಎಸ್.ಎಂ. ಜಾಮದಾರ ಅವರು ಹೇಳುವ ಪ್ರಕಾರ ಅನೇಕ ದೇವಾಲಯಗಳನ್ನು ಬಿಜೆಪಿ ನಾಯಕರೇ ಅತಿಕ್ರಮಿಸಿಕೊಂಡಿದ್ದಾರೆ. ಹಾಗಾದರೆ ದೇವಸ್ಥಾನಗಳ ಆಸ್ತಿಗಳನ್ನೂ ರಾಷ್ಟ್ರೀಕರಣ ಮಾಡಲಾಗುತ್ತದೆಯೇ? ಎಂದಿದ್ದು, ಅದಕ್ಕೆ ಸ್ವಾಮೀಜಿಗಳ ನಿಲುವೇನು ಎಂದು ಗಣಿಹಾರ ಪ್ರಶ್ನಿಸಿದರು.

ಮುದ್ದೇಬಿಹಾಳದ ಬಸರಕೋಡದಲ್ಲಿ ಜನಿಸಿ ಕನ್ಹೇರಿಗೆ ಹೋಗಿ ಅಲ್ಲಿನ ಮಠ ಅತಿಕ್ರಮಿಸಿದ ಶ್ರೀಗಳಿಗೆ ನಿಜವಾದ ಕಳಕಳಿ ಇದ್ದರೆ ಆ ದೇವಾಲಯಗಳನ್ನು ಬಿಡಿಸಿಕೊಳ್ಳಲು ಹೋರಾಟ ನಡೆಸಲಿ ನೋಡೋಣ ಎಂದರಲ್ಲದೇ, ಬಿಜೆಪಿ ಸರ್ಕಾರದ ಫಲಾನುಭವಿಯಾಗಿ, ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿರುವ ಕನ್ಹೇರಿ ಶ್ರೀಗಳು ಸಮಾಜದಲ್ಲಿ ಕೋಮು ದ್ವೇಷ ಹರಡುವುದನ್ನು ನಿಲ್ಲಿಸಬೇಕೆಂದರು.

ಕೇಂದ್ರ ಸಚಿವೆಯಾಗಿ ಶೋಭಾ ಕರಂದ್ಲಾಜೆ ಅವರು ನಾವು ವಕ್ಫ್ ನ್ಯಾಯ ಮಂಡಳಿ ಮುಂದೆ ಕೈ ಕಟ್ಟಿ ನಿಲ್ಲಬೇಕಾ? ಎನ್ನುತ್ತಾರೆ. ವಕ್ಫ್ ಸಂವಿಧಾನ ಬದ್ಧ ಬೋರ್ಡ್ ಅಲ್ಲವಾ? ಹಾಗಾದರೆ ಸಚಿವೆ ಶೋಭಾ ನೀಡಿದ ಹೇಳಿಕೆ ಸಂವಿಧಾನ ವಿರೋಧಿ ಅಲ್ಲವೇ? ರಾಜ್ಯ ಸರ್ಕಾರ ರೈತರ ಒಂದೇ ಒಂದು ಇಂಚು ಜಮೀನು ವಕ್ಫ್‌ಗೆ ಸೇರ್ಪಡೆಗೊಳಿಸಲ್ಲ ಎಂದು ಹೇಳಿದರೂ ಬಿಜೆಪಿಗರು ಮಾಡುವ ಈ ನಾಟಕ, ಕೇಂದ್ರದ ಜಂಟಿ ಸಂಸದ್ ಸಮಿತಿ ಅಧ್ಯಕ್ಷರು ನಿಯಮ ಉಲ್ಲಂಘಿಸಿ ಪಾಲ್ಗೊಳ್ಳುವ ಪ್ರಕ್ರಿಯೆ ಎಲ್ಲವೂ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.

ಇನ್ನೋರ್ವ ಮುಖಂಡ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಕನ್ಹೇರಿ ಸ್ವಾಮೀಜಿಗಳು ಸನಾತನ ಧರ್ಮ ಉಳಿಸಬೇಕೆನ್ನುತ್ತಾರೆ. ಆದರೆ ಸನಾತನ ಧರ್ಮದ ಪ್ರಕಾರ ಇವರು ಸ್ವಾಮೀಜಿ ಆಗಲು ಬರುವುದೇ ಇಲ್ಲ. ಇವರು ಸ್ವಾಮೀಜಿ ಆಗುವ ಹಕ್ಕು ಕೊಟ್ಟವರೇ ಬಸವಣ್ಣನವರು. ಇವರು ಉಡುಪಿ ಮಠಕ್ಕೆ ಹೋಗಿ ಸಹಪಂಕ್ತಿ ಭೋಜನ ಮಾಡಿ ತೋರಿಸಲಿ ನೋಡೋಣ ಎಂದು ಸವಾಲೆಸೆದರು.

ಕನ್ಹೇರಿ ಮಠ ಬಸವಣ್ಣನವರ ಪರಂಪರೆಯದ್ದು. ಅಂಥಲ್ಲಿ ಹೋಗಿ ಇವರು ಬಸವಣ್ಣನವರನ್ನೇ ಮರೆತಿದ್ದಾರೆ. ನಿಮ್ಮ ಸಂಸ್ಕೃತಿ, ಹಿನ್ನೆಲೆ, ಪರಂಪರೆ ಮೊದಲು ಅರಿಯಿರಿ ಎಂದು ಕನ್ಹೇರಿ ಸ್ವಾಮೀಜಿಗಳಿಗೆ ಹೇಳಿದರಲ್ಲದೇ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕುರಿತು ಮಾತನಾಡುತ್ತಾ, ಕೂಡಲ ಸಂಗಮ ಸ್ವಾಮೀಜಿ ಮೊದಲು ನಮ್ಮ ಜೊತೆ ಲಿಂಗಾಯತ ಹೋರಾಟ ಮಾಡಿದರು. ಬಸವಣ್ಣ ಬಸವಣ್ಣ ಎಂದರು. ಇದೀಗ ಸನಾತನ ಎನ್ನುತ್ತಿದ್ದಾರೆ. ಈ ಪಂಚಮಸಾಲಿ ಸಮಾಜವನ್ನೇ ನಡು ನೀರಿನಲ್ಲಿ ನಿಲ್ಲಿಸಲಾಗಿದೆ ಎಂದರು.

ದಲಿತ ಮುಖಂಡ ನಾಗರಾಜ ಲಂಬು, ಫಯಾಜ್ ಕಲಾದಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net