ಕುಡಿಹೊಂಡ ಕೆರೆ ಜಾಗ ಗ್ರಾಮಕ್ಕೆ ಬಿಟ್ಟು ಕೊಡಿ

10-klg 1 MANAVI
Published on

ಕಲಘಟಗಿ: ಕುಡಿಹೊಂಡ ಕೆರೆ ಜಾಗ ಭೂಹಗರಣ ಮಾಡಿಕೊಂಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಂಡು ಕೆರೆ ಜಾಗವನ್ನು ಗ್ರಾಮಕ್ಕೆ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಹನುಮಾಪುರ ಗ್ರಾಮಸ್ಥರು ಮಂಗಳವಾರ ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಂಕಣ್ಣವರ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಬೆಲವಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಾಪುರ ಗ್ರಾಮದಲ್ಲಿನ ಗಂಗವ್ವ ಪ್ರೇಮಗಿರಿ ಭಾವನವರ ಮನೆ ಆಸ್ತಿ ನಂ. 10 ರ ಪಶ್ಚಿಮ ದಿಕ್ಕಿಗಿರುವ, ಕುಡಿಹೊಂಡ ಕೆರೆ ಜಾಗವನ್ನು ಗ್ರಾಮದ ಉಪಾಧ್ಯಕ್ಷೆ ಸಹನಾಜಬಿ ಉಗ್ಗಿನಕೇರಿ ಅವರ ಅಧಿಕಾರವಧಿಯಲ್ಲಿ ಉಪಾಧ್ಯಕ್ಷೆಯ ಪತಿ ಕಲಂದರ ಉಗ್ಗಿನಕೇರಿ ಎಂಬುವವರು, ಮನೆ ಆಸ್ತಿ ನಂ. 10ರ ಜೊತೆಗೆ ಕೆರೆ ಜಾಗ ಸೇರ್ಪಡೆ ಮಾಡಿಸಿ, ಆಸ್ತಿ ನಂ 10/1 ಎಂದು ಗ್ರಾಮ ಪಂಚಾಯಿತಿ ರಿಜಿಸ್ಟರ್​ನಲ್ಲಿ, ಗಂಗವ್ವ ಭಾವನವರ ಎಂಬುವವರ ಹೆಸರಿನಲ್ಲಿ ಇ-ಸ್ವತ್ತು ಉತ್ತಾರ ದಾಖಲಿಸಿದ್ದಾರೆ.

ಅಧಿಕಾರ ದುರುಪಯೋಗ ಪಡಿಸಿಕೊಂಡು ಉಪನೋಂದಣಿ ಕಚೇರಿಯಲ್ಲಿ ಕೆರೆ ಜಾಗವನ್ನು ಖುಲ್ಲಾ ಜಾಗವೆಂದು ಕಲಂದರ ಉಗ್ಗಿನಕೇರಿ ಮೋಂದಣಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪಿಡಿಒ, ತಾಪಂ ಇಒ ಹಾಗೂ ಕಲಘಟಗಿ ದಂಡಾಧಿಕಾರಿಗಳು, ಉಪಾಧ್ಯಕ್ಷರ ಮೇಲೆ ಹಾಗೂ ಜಾಗವನ್ನು ತಮ್ಮ ಹೆಸರಿಗೆ ದಾಖಲು ಮಾಡಿಕೊಂಡವರ ಮೇಲೆಯೂ ಸೂಕ್ತ ಕ್ರಮ ಕೈಗೊಂಡು ಕೆರೆ ಜಾಗವನ್ನು ಗ್ರಾಮಕ್ಕೆ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಮಾನಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಗ್ರಾಮಸ್ಥರೆಲ್ಲರೂ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಎಚ್ಚರಿಸಿದರು.

ಗ್ರಾಮಸ್ಥರಾದ ಶಂಕರಗಿರಿ ಭಾವನವರ, ಬಸವರಾಜ ಶಿವಶೆಟ್ಟರ, ಅಜ್ಜಪ್ಪ ಶಿವಶೆಟ್ಟರ, ಮಂಜುನಾಥ ಡೋಣಿ, ಕಲ್ಲಪ್ಪ ಶಿವಶೆಟ್ಟರ, ಮಾಬೂಸಾಬ್ ಬಮ್ಮಿಗಟ್ಟಿ, ಶಿವಪುತ್ರಪ್ಪ ಶಿವಶೆಟ್ಟರ, ಬಾಬಾಜಾನ್ ಮುಲ್ಲಾನವರ, ರವಿ ಶಿವಶೆಟ್ಟರ, ಚನ್ನಪ್ಪ ಶಿವಶೆಟ್ಟರ, ಬೈಲಪ್ಪ ಭರಮಪ್ಪನವರ, ಗೌಸುಸಾಬ್ ಧಾರವಾಡ, ರಫೀಕ್ ಬಮ್ಮಿಗಟ್ಟಿ, ನಾಗಪ್ಪ ಭರಮಪ್ಪನವರ, ಸೈದುಸಾಬ್ ಮುಲ್ಲಾನವರ, ಶಾಂತೇಶ ನೀರಲಕಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net