ಕರೊನಾ ಸೋಂಕು ನಿಯಂತ್ರಣದಲ್ಲಿದೆ ಭಯ ಬಿಡಿ

Edited Yeddiyurappa
Published on

ಬೆಳಗಾವಿ: ಕರೊನಾ ಸೋಂಕು ಹರಡದಂತೆ ಎಲ್ಲ ವಿಮಾನ ನಿಲ್ದಾಣಗಳಲ್ಲೂ ವಿದೇಶಿ ಪ್ರಯಾಣಿಕರನ್ನು ವಿಶೇಷವಾಗಿ ತಪಾಸಣೆ ಮಾಡಲಾಗುತ್ತಿದೆ. ಹಲವರ ಮೇಲೆ ಈಗಾಗಲೇ ನಿಗಾ ಇಡಲಾಗಿದ್ದು, ರಾಜ್ಯಾದ್ಯಂತ ಸರ್ಕಾರ ಮುನ್ನೆಚ್ಚರಿಕೆಯಾಗಿ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಎಂಎಲ್​ಸಿ ಮಹಾಂತೇಶ ಕವಟಗಿಮಠ ಮಗಳ ಮದುವೆ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕರೊನಾ ಸೋಂಕು ಹರಡಬಾರದು ಎಂಬ ಉದ್ದೇಶದಿಂದಲೇ ರಾಜ್ಯಾದ್ಯಂತ ಒಂದು ವಾರ ಮುಂಜಾಗ್ರತೆಯಾಗಿ ಎಲ್ಲ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಕರೊನಾ ತಡೆಗೆ ಆರೋಗ್ಯ ಇಲಾಖೆ ಸಕಲ ಸನ್ನದ್ಧವಾಗಿದೆ ಎಂದರು. ರಾಜ್ಯದಲ್ಲಿ ಈಗಾಗಲೇ ಆರು ಜನರಲ್ಲಿ ಸೋಂಕು ಪತ್ತೆಯಾಗಿದ್ದು, 100 ಜನರ ಶಂಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಸದ್ಯ ರಾಜ್ಯದಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಒಂದು ವಾರದ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net