ಉಪ ಪಂಗಡಗಳ ವ್ಯಾಮೋಹ ಬಿಟ್ಟು ಒಂದಾಗಿ

03-12-Shiva-1
ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಬಯಲ ಸಿರಿ ಬೆಳಕು ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಉದ್ಘಾಟಿಸಿದರು. ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಬಸನಗೌಡ ಬ್ಯಾಗವಾಟ, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಇದ್ದರು.
Published on

ರಾಯಚೂರು: ವೀರಶೈವ ಲಿಂಗಾಯತರು ಉಪ ಪಂಗಡಗಳ ವ್ಯಾಮೋಹವನ್ನು ಬಿಟ್ಟು ಒಂದಾಗಬೇಕಾಗಿದೆ. ಸಮಾಜದಲ್ಲಿನ 102 ಉಪ ಪಂಗಡಗಳಿಂದಾಗಿ ನಮ್ಮಲ್ಲಿನ ಒಗ್ಗಟ್ಟು ಕಡಿಮೆಯಾಗುತ್ತಿದ್ದು, ಎಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣದಲ್ಲಿ ಮಹಾಸಭಾದ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಬಯಲ ಸಿರಿ ಬೆಳಕು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣರು ಆರಿಸಿಕೊಂಡಿರುವುದು ವೀರಶೈವ ಲಿಂಗಾಯತ ಎನ್ನುವ ಒಂದೇ ಧರ್ಮ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗೋಣ ಎಂದರು.
ಸಮಾಜಕ್ಕಾಗಿ ಕೆಲಸ ಮಾಡುವವರ ಬಗ್ಗೆ ಟೀಕೆ ಮಾಡುವುದನ್ನು ಬಿಡಬೇಕು. ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿ ಕುಳಿತುಕೊಳ್ಳಿ. ಸಮಾಜದಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಸಣ್ಣವರಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮಾಜಕ್ಕೆ ಒಳಿತಾಗಲಿದೆ ಎಂದು ಹೇಳಿದರು.
ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ ಮಾತನಾಡಿ, ಜಾತಿ ಗಣತಿಯಿಂದ ನಮ್ಮ ಮುಂದಿನ ಜನಾಂಗಕ್ಕೆ ಸಮಸ್ಯೆಯಾಗುವ ಕಾರಣಕ್ಕೆ ಅದನ್ನು ವಿರೋಸುತ್ತಿದ್ದೇವೆ. ದಾವಣಗೆರೆಯಲ್ಲಿ ನಡೆಯುವ ಅವೇಶನದಲ್ಲಿ ಈಗಿನ ಕಾಲಗಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದರ ಜತೆಗೆ ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ.
ಸಮಾಜ ರಾಜ್ಯದಲ್ಲಿ ಒಬಿಸಿ ಪಟ್ಟಿಯಲ್ಲಿದ್ದರೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಈ ನಿಟ್ಟಿನ ಮಹಾಸಭಾ ಕೆಲಸ ಮಾಡುತ್ತಿದ್ದು, ಜತೆಗೆ 5 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ 5 ಕೋಟಿ ರೂ. ವೆಚ್ಚ ಮಾಡುತ್ತಿದೆ. ಜತೆಗೆ ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚ ಭರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕಾಂತರಾಜ್ ವರದಿ ಜಾರಿಯಾದರೆ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಕಳೆದುಕೊಳ್ಳುವ ಆತಂಕವಿದೆ. ಆಯೋಗದ ವರದಿ ಜಾರಿ ವಿರುದ್ಧ ಹೋರಾಟಕ್ಕೆ ಎಲ್ಲರೂ ಅಣಿಯಾಗಬೇಕಾಗಿದೆ.
ಆಯೋಗದ ವರದಿಯಲ್ಲಿ ಒಳ ಪಂಗಡಗಳ ಸಮೀಕ್ಷೆ ನಡೆದಿರುವುದರಿಂದ ಸಮಾಜದ ಜನಸಂಖ್ಯೆ ಗಣನೀಯ ಇಳಿಕೆಯಾಗಿ ಸ್ಥಾನಮಾನಗಳು ದೊರೆಯುವುದು ದುಸ್ತರವಾಗಲಿದೆ. ಒಳಪಂಗಡಗಳನ್ನು ಬಿಟ್ಟು ಎಲ್ಲರೂ ಒಂದು ಎನ್ನುವ ಮನೋಭಾವ ಬರಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯಗೆ ಬಯಲ ಸಿರಿ ಬೆಳಕು ಪ್ರಶಸ್ತಿ ಪ್ರದಾನ ಮಾಡಲಾಯಿತು. ತ್ರಿಕಾಲ ಸತ್ಯ ಗ್ರಂಥ ಬಿಡುಗಡೆ ಹಾಗೂ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಮಠಾೀಶರಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಬಸನಗೌಡ ಬ್ಯಾಗವಾಟ, ವೀರಶೈವ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಪದಾಕಾರಿಗಳಾದ ಪಾರ್ವತಿ ಕಾರಡ್ಡಿ, ರಾಜೇಶ್ವರಿ ನಾಗರಾಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net