ವ್ಯಸನ ಬಿಟ್ಟು ಗುರಿಯತ್ತ ಗಮನಹರಿಸಿ

ಚಿತ್ರ 27ಎಸ್ ಡಿ ಪಿ 6
Published on

ಮಡಿಕೇರಿ: ವಿದ್ಯಾರ್ಥಿಗಳು ವ್ಯಸನಕ್ಕೆ ದಾಸರಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಿದರೆ ಗುರಿ ಮುಟ್ಟಬಹುದು ಎಂದು ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಸಲಹೆ ನೀಡಿದರು.


ಸಿದ್ದಾಪುರ ನೈಮ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಸಂಘಟನೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿ ನೆಲ್ಯಹುದಿಕೇರಿಯ ಕೆ.ಎಂ. ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಪಾಲಕರ ಪಾತ್ರ ಕೂಡ ಅತ್ಯಗತ್ಯವಾಗಿದೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮನಸ್ಸು ಹೊಂದಿರುತ್ತಾರೆ. ಉನ್ನತ ಹುದ್ದೆ ಪಡೆಯುವ ಗುರಿ ಹೊಂದಿರುತ್ತಾರೆ. ಆದರೆ, ಅವರಿಗೆ ಸರಿಯಾದ ಮಾರ್ಗದರ್ಶನ, ಮಾಹಿತಿ ಕೊರತೆಯಿಂದಾಗಿ ಎಲ್ಲದರಿಂದ ವಂಚಿತರಾಗುತ್ತಾರೆ. ಹಾಗಾಗಿ, ಅಂತಹ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರ ಅತ್ಯುಪಯುಕ್ತವಾಗಿದೆ ಎಂದು ತಿಳಿಸಿದರು.


ಸಹಾಯಕ ಪ್ರಾಧ್ಯಾಪಕ ನೆಲ್ಯಹುದಿಕೇರಿಯ ನೌಶಾದ್ ಮತ್ತು ತಿತಿಮತ್ತಿಯ ಶಾಕಿರ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಗಾರದಲ್ಲಿ ನೆಲ್ಯಹುದಿಕೇರಿ ಸುತ್ತಮುತ್ತಲಿನ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7 ನೇ ಸ್ಥಾನ ಪಡೆದ ನೆಲ್ಯಹುದಿಕೇರಿಯ ಜಾನ್ಸನ್ ಅವರ ಪುತ್ರಿ ಗೋಣಿಕೊಪ್ಪಲು ವಿದ್ಯಾನಿಕೇತನ ಶಾಲೆಯ ಚರೀಷ್ಮ ಹಾಗೂ ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದ ನೆಲ್ಯಹುದಿಕೇರಿಯ ಇಸ್ಮಾಯಿಲ್ ಎಂಬವರ ಪುತ್ರಿ ಸಿದ್ದಾಪುರದ ಇಕ್ರಾ ಶಾಲೆಯ ಸಫ್ನಾ ಅವರನ್ನು ಗಣ್ಯರು ಸನ್ಮಾನಿಸಿದರು. ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಪಡೆದ ನೆಲ್ಯಹುದಿಕೇರಿ ಭಾಗದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನೆಲ್ಯಹುದಿಕೇರಿ ಕೆಪಿಎಸ್ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲ ಅನಿಲ್ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮೆಹಬೂಬ್ ಮಾಸ್ಟರ್, ಶಿಕ್ಷಕರಾದ ಭರತ್, ಜಾಫರ್, ಇಸ್ಮಾಯಿಲ್, ಸಿದ್ದಾಪುರ ಗ್ರಾ.ಪಂ. ಪಿಡಿಓ ಶಫೀಕ್, ಪ್ರಮುಖರಾದ ಎ.ಕೆ ಹಕಿಂ, ಡಾ. ಉದಯ ಕುಮಾರ್, ಜೋಸೆಫ್ ಶ್ಯಾಂ, ಕೆ.ಎಂ ಬಶೀರ್, ನಿಯಾಸ್ ಸುಂಟಿಕೊಪ್ಪ, ಸಾಬು ವರ್ಗೀಸ್, ಕೆ.ಯು ಅಬ್ದುಲ್ ಮಜೀದ್, ಎ.ಕೆ ಅಬ್ದುಲ್ಲಾ, ಸಫಿಯಾ ಮುಹಮ್ಮದ್, ಹನೀಫ, ಮುಸ್ತಫ, ನೌಶಾದ್, ಜಂಶೀರ್ ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net