

* ಪೋಸ್ಟ್ ಆಫೀಸ್ನಿಂದ ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ 2.0 (ಎಪಿಟಿ) ಅಳವಡಿಕೆ
ಗಂಗಾಧರ್ ಬೈರಾಪಟ್ಟಣ, ರಾಮನಗರ
"ಅಯ್ಯೋ... ನಾನು ಪೋಸ್ಟ್ ಬಾಕ್ಸ್ಗೆ ಹಾಕಿ ಬಂದಿದ್ದ ಪತ್ರ, ಸಂಬಂಧಪಟ್ಟವರಿಗೆ ತಲುಪೇ ಇಲ್ಲ. ಪೋಸ್ಟ್ ಆಫೀಸ್ನಲ್ಲಿ ಕೇಳಿದ್ರೆ, ನಾವು ಕಳುಹಿಸಿದ್ದೇವೆ ಎನ್ನುವ ಉತ್ರ ಕೊಡ್ತಾರೆ. ಏನ್ಮಾಡೋದು...'
ಹೌದು. ಕಳುಹಿಸಿದ ಅಂಚೆ ಸಂಬಂಧಪಟ್ಟರಿಗೆ ಹೋಗದೆ ಇದ್ದಾಗ ಇಂತಹ ಪ್ರಶ್ನೆ ಮೂಡುವುದು ಸಾಮಾನ್ಯ. ಕೊನೆಗೆ ಅಂಚೆಯಣ್ಣ ಹಾಗೂ ಇಲಾಖೆಗೆ ಶಾಪ ಹಾಕಿ ಸುಮ್ಮನಾಗುತ್ತೇವೆ.
ಆದರೆ, ಅಂಚೆ ಮಿಸ್ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಅಂಚೆ ಇಲಾಖೆ ಹೊಸ ಅವಿಷ್ಕಾರ ಮಾಡಿದ್ದು, ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ 2.0 (ಎಪಿಟಿ) ಅಳವಡಿಸಿಕೊಂಡು, ಹೊಸ ಕ್ರಾಂತಿಗೆ ಮುಂದಾಗಿದೆ.
ಕಳೆದ ಕೆಲ ದಿನಗಳ ಹಿಂದೆ ರಾಮನಗರ ಎಫ್ಪಿಒ ಸಂದ ಸುಮಾರು ಒಂದು ಸಾವಿರ ಸದಸ್ಯರಿಗೆ ಸಾಮಾನ್ಯ ಅಂಚೆ ಮೂಲಕ ಸಭಾ ಸೂಚನೆ ನೀಡಿತ್ತು. ಆದರೆ, ಇಂತಹ ನೋಟಿಸ್ಗಳು ಕೆಲವರನ್ನು ಹೊರತುಪಡಿಸಿ ಹೆಚ್ಚಿನ ಸದಸ್ಯರಿಗೆ 3 ಬಾರಿಯೂ ತಲುಪೇ ಇರಲಿಲ್ಲ. ನಂತರ ನೀವು ಬೈಲಾ ನಿಯಮದಂತೆ ಮೂರು ಬಾರಿ ಸಭೆಗೆ ಭಾಗವಹಿಸದೆ ಇರುವ ಕಾರಣ, ಸದಸ್ಯತ್ವ ಏಕೆ ರದ್ದು ಮಾಡಬಾರದು ಎಂದು ನೋಂದಾಯಿತ ಅಂಚೆ ಮೂಲಕ ನೋಟಿಸ್ ನೀಡಲಾಗಿತ್ತು. ಆದರೆ, ನೋಟಿಸ್ ತಲುಪದ ಬಗ್ಗೆ ಸದಸ್ಯರು ಸಂದ ಆಡಳಿತ ಮಂಡಳಿ ಗಮನಕ್ಕೆ ತಂದಾಗ, ಆಡಳಿತ ಮಂಡಳಿ ಅಂಚೆ ಇಲಾಖೆಯಿಂದ ಆಗಿರುವ ಪ್ರಮಾದವನ್ನು ಪತ್ರದ ಮೂಲಕ ತಿಳಿಸಿತ್ತು. ನಂತರ ಆಂತರಿಕ ತನಿಖೆ ನಡೆಸಿದ ಅಂಚೆ ಇಲಾಖೆ ತಮ್ಮಿಂದ ಆಗಿರುವ ತಪ್ಪನ್ನು ಒಪ್ಪಿಕೊಂಡಿತ್ತು. ಇದೇ ರೀತಿ ಹಲವಾರು ಪ್ರಕರಣಗಳು ನಡೆದಿವೆ.
ಸಾಮಾನ್ಯ ಅಂಚೆಯನ್ನು ಪೆಟ್ಟಿಗೆಗೆ ಹಾಕಿ ಬಂದ ನಂತರ ಏನಾಯ್ತು ಎನ್ನುವ ಮಾಹಿತಿ ಯಾರ ಬಳಿಯೂ ಇರುವುದಿಲ್ಲ. ಅಂಚೆ ಇಲಾಖೆ ನಾವು ರವಾನೆ ಮಾಡಿದ್ದೇವೆ ಎಂಬ ಉತ್ತರವನ್ನಷ್ಟೇ ನೀಡಿ ಕೈ ತೊಳೆದುಕೊಳ್ಳುತ್ತಿತ್ತು. ಆದರೆ, ಅಂಚೆ ಇಲಾಖೆ ಅಳವಡಿಸಿಕೊಂಡಿರುವ ಎಟಿಪಿ 2.0 ತಂತ್ರಾಂಶ ಸಾಮಾನ್ಯ ಅಂಚೆಯನ್ನೂ ಟ್ರಾಕ್ ಮಾಡಲಿದೆ. ಅಂಚೆ ತಲುಪಿಲ್ಲ ಎಂಬ ದೂರಿಗೆ ಇದರಿಂದ ಮುಕ್ತಿ ಸಿಗಲಿದೆ.
ನೀವು ಕಳುಹಿಸುವ ಸಾಮಾನ್ಯ ಅಂಚೆ ಸಂಬಂಧಪಟ್ಟವರಿಗೆ ತಲುಪಿದೆಯೇ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರು ಹೊಸ ನಿಯಮವನ್ನು ಪಾಲನೆ ಮಾಡಬೇಕು. ಅಂಚೆಯನ್ನು ಡಬ್ಬಕ್ಕೆ ಹಾಕುವ ಬದಲು ಪೋಸ್ಟ್ ಆಫೀಸ್ಗೆ ತೆರಳಿ ಎಂದಿನಂತೆ ಸ್ಟಾಂಪ್ ಅಂಟಿಸಿದ ಅಂಚೆ ಜತೆಗೆ 5 ರೂ. ನೀಡಿ ಹೆಚ್ಚುವರಿ ಹಣವನ್ನು ಪಾವತಿ ಮಾಡಿದರೆ, ನಿಮ್ಮ ಅಂಚೆಗೆ ಬಾರ್ ಕೋಡ್ ಸೃಜನೆಯಾಗುತ್ತದೆ. ಇದರ ಮೂಲಕ ಅಂಚೆಯನ್ನು ಸಂಬಂಧಪಟ್ಟವರಿಗೆ ತಲುಪುವವರೆಗೂ ಟ್ರಾಕ್ ಮಾಡಬಹುದಾಗಿದೆ.
ಈಗಾಗಲೇ ರಾಜ್ಯದ ಬೆಂಗಳೂರು, ಮೈಸೂರು ವೃತ್ತ ಸೇರಿ ದೇಶದ 9 ವೃತ್ತಗಳಲ್ಲಿ ಹೊಸ ತಂತ್ರಾಂಶ ಎಟಿಪಿ 2.0 ಅಳವಡಿಸಿಕೊಂಡಿದೆ. ಇನ್ನೂ ದೇಶದ 14 ವೃತ್ತಗಳಲ್ಲಿ ಇದನ್ನು ಜಾರಿಗೊಳಿಸಬೇಕಿದ್ದು, ಹಂತ ಹಂತವಾಗಿ ಇದರ ಕಾರ್ಯ ನಡೆಯುತ್ತಿದೆ.
ಎಟಿಪಿ 2.0 ತಂತ್ರಾಂಶವನ್ನು ಅಂಚೆ ಇಲಾಖೆ ಅಳವಡಿಸಿಕೊಂಡಿದೆಯಾದರೂ, ಸ್ಪೀಡ್ ಪೋಸ್ಟ್ ಸೇವೆಯೇ ಉತ್ತಮ ಎನ್ನುತ್ತಾರೆ ಅಂಚೆ ಇಲಾಖೆ ಕೆಲ ಸಿಬ್ಬಂದಿ. 17 ರೂ. ಪಾವತಿ ಮಾಡಿದರೆ ಅಂಚೆ ಸಂಬಂಧಪಟ್ಟವರಿಗೆ ತಲುಪುವ ಜತೆಗೆ, ಟ್ರಾಕ್ ಕೂಡ ಆಗಲಿದೆ. ಅಲ್ಲದೆ, ಒಟಿಪಿ, ಆಧಾರ್ ಸೇರಿ ವಿವಿಧ ಹಲವಾರು ದಾಖಲೆಗಳ ಆಧಾರಿತ ವಿತರಣೆ ವ್ಯವಸ್ಥೆಯೂ ಇದೆ ಎನ್ನುತ್ತಾರೆ ಸಿಬ್ಬಂದಿ. ಇದರಿಂದ ಅಂಚೆ ವೇಗವಾಗಿ ತಲುಪುವ ಜತೆಗೆ ಸಂಬಂಧಪಟ್ಟವರಿಗೆ ತಲುಪಿದೆ ಎನ್ನುವುದನ್ನು ಖಾತ್ರಿ ಪಡಿಸುತ್ತದೆ.